ಕಲ್ಪ ಮೀಡಿಯಾ ಹೌಸ್ | ಸಾಗರ |
ಬದುಕನ್ನು ಅರ್ಥ ಮಾಡಿಕೊಳ್ಳಲು ಅಗತ್ಯ ವಾದ ಭಾಷೆಯನ್ನು ಎಲ್ಲರೂ ಕಲಿಯಬೇಕು. ಬದುಕುವ ಎಲ್ಲರೂ ನಿತ್ಯ ಜೀವನದಲ್ಲಿ ಭಾಷೆ ಬಳಸುತ್ತಾರೆ. ಆದರೆ ಬದುಕನ್ನು ಅರ್ಥ ಮಾಡಿಕೊಳ್ಳಲು ಅಗತ್ಯ ವಾದ ಭಾಷೆ ಕಲಿಯುವುದಿಲ್ಲ ಎಂದು ನೀನಾಸಮ್ ಸಂಸ್ಥೆಯ ಕೆ.ವಿ. ಅಕ್ಷರ ಹೇಳಿದರು.
ತಾಲೂಕಿನ ಭೀಮನಕೋಣೆಯ ಶ್ರೀಲಕ್ಷ್ಮೀ ನಾರಾಯಣ ಕಲ್ಯಾಣ ಮಂಟಪದಲ್ಲಿ ಶಿವಮೊಗ್ಗದ ಭಾ.ಮ. ಶಿಕ್ಷಣ ಮತ್ತು ಸಾಂಸ್ಕೃತಿಕ ವೇದಿಕೆ,ರಾಮನಿಲಯ ಕ್ರಿಯೇಷನ್ಸ್ ಏರ್ಪಡಿಸಿದ್ದ ಲಕ್ಷ್ಮೀ ನಾರಾಯಣ ಕಾಶಿ ರಚಿಸಿದ ಬದುಕಿಗೊಂದು ಭಾಷೆ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ಪರಿಚಯ ಮಾಡಿ ಮಾತನಾಡಿದರು.
ಬದುಕಿಗೊಂದು ಭಾಷೆ ಕೃತಿಯಲ್ಲಿ ಬದುಕಿಗೆ ಅಗತ್ಯವಾದ ಹಲವು ಮೌಲ್ಯಗಳನ್ನು ಕಟ್ಟಿಕೊಡುತ್ತದೆ. ಹಾಸ್ಯ ಪ್ರಜ್ಞೆಯ ಧ್ವನಿ ಈ ಕೃತಿಯಲ್ಲಿದೆ. ನಾನು ಮತ್ತು ನನ್ನತನ ಈ ಪುಸ್ತಕದಲ್ಲಿ ಕಂಡು ಬರುತ್ತದೆ. ಸಾಮುದಾಯಿಕ ಚಿಂತನೆಯ ಉದಾಹರಣೆಗಳಿವೆ. ಆದರೆ ಹೀಗೆಯೇ ಇರಬೇಕು ಎನ್ನುವ ಬೋಧನೆ ಕಂಡುಬರುವುದಿಲ್ಲ ಎಂದು ಹೇಳಿದರು.
ಸಮುದಾಯಗಳು ಕಳೆದು ಹೋಗುವ ಸ್ಥಿತಿ ನಿರ್ಮಾಣ ಆಗಿದೆ. ಈ ಸಂದರ್ಭದಲ್ಲಿ ಒಂದು ವಿಷಯವನ್ನು ಸಾಮುದಾಯಿಕ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಇಂತಹ ಸಾಮುದಾಯಿಕ ಚಿಂತನೆ ಆರೋಗ್ಯಕರವಿದುದು. ಲಕ್ಷ್ಮೀ ನಾರಾಯಣ ಕಾಶಿ ಅವರ ಬದುಕಿಗೊಂದು ಭಾಷೆ ಕೃತಿಯಲ್ಲಿ ಇಂತಹ ಆರೋಗ್ಯಕರ ಕ್ರಮಗಳಿವೆ. ಇಲ್ಲಿನ ಲೇಖನಗಳಲ್ಲಿ ಸಿದ್ಧಾಂತಗಳಿಲ್ಲ ಆದರೆ ಹೊಳವುಗಳಿವೆ ಎಂದರು
ಕೃತಿ ಲೋಕಾರ್ಪಣೆ ಮಾಡಿದ ಡಾ.ಜಿ.ಎಸ್. ಭಟ್ಟ ಮಾತನಾಡಿ, ಕೃತಿ ಪ್ರಕಾಶನ ಅತ್ಯಂತ ಸವಾಲಿನ ಕೆಲಸ. ಸಗಟು ಖರೀದಿಯಂತಹ ಲೇಖಕರ ಪರವಾದ ಉತ್ತಮ ಯೋಜನೆ ವಿಫಲವಾಗುತ್ತಿದೆ. ಲಕ್ಷ್ಮೀ ನಾರಾಯಣ ಕಾಶಿ ಅವರ ಬದುಕಿಗೊಂದು ಭಾಷೆ ಕೃತಿಯನ್ನು ಅಕ್ಷರ ಪ್ರಕಾಶನ ಪ್ರಕಟಿಸಿದೆ. ಅಕ್ಷರ ಪ್ರಕಾಶನ ಸಂಸ್ಥೆಯಲ್ಲಿ ಕೃತಿ ಪ್ರಕಟಣೆ ಆಗುವುದು ಹಲವಾರು ಕಾರಣಗಳಿಂದಾಗಿ ಹೆಮ್ಮೆಯ ಸಂಗತಿ ಎಂದರು.
Also read: ಅಯೋಧ್ಯೆ | ರಾಮಮಂದಿರ ಪ್ರತಿಷ್ಠಾಪನಾ ವಿಧಿವಿಧಾನ ಆರಂಭ | ಪ್ರತಿದಿನ ಏನೆಲ್ಲಾ ಕಾರ್ಯ ನಡೆಯಲಿದೆ?
ಕೃತಿಕಾರ ಲಕ್ಷ್ಮೀ ನಾರಾಯಣ ಕಾಶಿ ಮಾತನಾಡಿ, ಹುಟ್ಟಿ ಬೆಳೆದ ಊರಿನಲ್ಲಿ ಕೃತಿ ಬಿಡುಗಡೆ ಮತ್ತು ಗೌರವ ಸಮರ್ಪಣೆ ನನ್ನ ಬದುಕಿನ ಭಾಗ್ಯ. ಗ್ರಾಮದವರು ಒಟ್ಟಾಗಿ ಸಾಮಾಜಿಕ ಕಾರ್ಯಕ್ರಮ ಸಂಘಟನೆಯ ಆದರ್ಶ ಗ್ರಾಮ ಭೀಮನ ಕೋಣೆ ಗ್ರಾಮವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಜಯಪ್ರಕಾಶ ಮಾವಿನಕುಳಿ ಮಾತನಾಡಿದರು. ಡಾ.ಯಶೋಧ ಕಾಶಿ ವೇದಿಕೆಯಲ್ಲಿ ಇದ್ದರು. ಬಿಎಚ್ ರಾಘವೇಂದ್ರ ಅವರು, ಕಾಶಿ ದಂಪತಿಯನ್ನು ಅಭಿನಂದಿಸಿ ಮಾತನಾಡಿದರು.
ಪೂರ್ವಿ ಕಾಶಿ ಪ್ರಾರ್ಥಿಸಿ, ರವಿ ಕಾಶಿ ಸ್ವಾಗತಿಸಿದರು. ರಾಘವೇಂದ್ರ ಶರ್ಮಾ ವಂದಿಸಿ, ಕಿರಣ ನಿರೂಪಿಸಿದರು.
(ವರದಿ: ಮಧುರಾಮ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















