ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಎನ್. ನಗರದ ಸಂತೆ ಮಾರುಕಟ್ಟೆ ಸಮೀಪ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 27 ವರ್ಷದ ಯುವಕನನ್ನು ಸಾಗರ ಟೌನ್ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 14ರಂದು ಎಸ್.ಎನ್. ನಗರದ ಸಂತೆ ಮಾರುಕಟ್ಟೆ ಬಳಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾಗರ ಟೌನ್ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಸಾಗರ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು.
ಈ ವೇಳೆ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಹಫೀಜ್ ಉರ್ ರೆಹಮಾನ್ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಆರೋಪಿಯ ಬಳಿಯಿಂದ 6 ಗ್ರಾಂ 77 ಮಿಲಿಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಅಂದಾಜು ಮೌಲ್ಯ ಸುಮಾರು ₹20,000 ಎಂದು ತಿಳಿದುಬಂದಿದೆ.
Also read>> ತಾಳಗುಪ್ಪ–ಬೆಂಗಳೂರು, ಯಶವಂತಪುರ–ಶಿವಮೊಗ್ಗ ಇಂಟರ್‌ಸಿಟಿ ಸಂಚಾರದಲ್ಲಿ ಮಹತ್ವದ ಬದಲಾವಣೆ
ಮಾದಕ ವಸ್ತುವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ, ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 163/2026ರಂತೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಾದಕ ವಸ್ತುಗಳ ಅಕ್ರಮ ಮಾರಾಟ ಹಾಗೂ ಸಾಗಾಟದ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


