ಸಾಗರ: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಇಂದು ಸಾಗರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು, ನಮ್ಮ ನಡೆ ಅಭಿವೃದ್ದಿ ಕಡೆ ಎಂಬ ಉವಾಚ ಹೊರಡಿಸಿದ್ದಾರೆ.
ಇಂದು ಸಾಗರದ ರಾಘವೇಶ್ವರ ಸಭಾಭವನದಲ್ಲಿ ಸಾಗರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರಮುಖರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ದೃಢ ಸರ್ಕಾರಕ್ಕಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅವರನ್ನು ಬೆಂಬಲಿಸಬೇಕು. ಇದು ನಮ್ಮ ನಿಮ್ಮೆಲ್ಲರ ಗುರಿಯಾಗಿದೆ ನಮ್ಮದು ಅಭಿವೃದ್ಧಿಯ ಕಡೆಗೆ ಎಂದರು.

ಸಾಗರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಅಧಿಕಾರದಲ್ಲಿ ಮಾಡಿದ್ದು ಪ್ರಮುಖವಾಗಿ ಅಂಬಾರಗೋಡ್ಲು- ಕಳಸವಳ್ಳಿ ಸಿಗಂದೂರು ಸೇತುವೇ ನಿರ್ಮಾಣಕ್ಕೆ ಶ್ರಮವಹಿಸಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಟೆಂಡರ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ ಎಂದರು.

ನಾನು ಸಂಸದನಾದ ನಂತರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಕ್ಷೇತ್ರದಾದ್ಯಂತ ತಂಗುದಾಣ ಕುಡಿಯುವ ನೀರು, ಶಾಲಾ ಕಾಲೇಜುಗಳಿಗೆ ಅನುದಾನ, ಹೈಮಾಸ್ಟ್ ಲೈಟ್ ಅಳವಡಿಕೆ, ಸಮುದಾಯ ಭವನಗಳ ನಿರ್ಮಾಣ, ರಸ್ತೆ -ಚರಂಡಿ ಅಭಿವೃದ್ಧಿ ಸೇರಿದಂತೆ ಇನ್ನಿತರ ಅಭಿವೃದ್ಧಿಯ ಕಾಮಗಾರಿಗಳನ್ನು ಮಾಡಲಾಗಿದೆ ಎಂದರು.

















