ನೃತ್ಯ ಭಾವನೆಗಳ ಮಿಳಿತ; ಕ್ರಿಯಾತ್ಮಕತೆಯ ಪ್ರತಿಬಿಂಬ; ಸಂತಸದ ಛಾಪು; ದೈಹಿಕ ಸ್ಥಿರತೆಯ ರೂಪ; ಮಾನಸಿಕ ದೃಢತೆಯ ಸಂಕಲ್ಪ. ಒಟ್ಟಾಗಿ ಮಾನವ ಸಹಜ ಭಾವನೆಗಳ ಅಭಿವ್ಯಕ್ತಿಯ ಸ್ವರೂಪ. ಆಧುನಿಕ ಪ್ರಪಂಚದಲ್ಲಿ ಕಲೆಯ ಶಿಕ್ಷಣವಾಗಲಿ ಪ್ರತಿಪಾದನೆಯಾಗಲಿ ಮಾಡದವರೇ ಇಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಮಕ್ಕಳು ಕಲೆಯ ಆವರಣದಲ್ಲಿ ಬೆಳೆಯಲಿ ಅನ್ನುವ ಪೋಷಕರೇ ಹೆಚ್ಚು.
ಸಾಂಸ್ಕೃತಿಕತೆಯ ಜೀವಂತ ಪ್ರತಿರೂಪವೆನಿಸಿರುವ ಭಾರತದಂತಹ ರಾಷ್ಟ್ರಗಳಲ್ಲಿ ಕಲೆಗಾಗಲೀ ಕಲಾವಿದನಿಗಾಗಲೀ ದೇವತಾ ಸ್ವರೂಪರು ಎನ್ನುವಷ್ಟು ಗೌರವ ದೊರೆಯುತ್ತಿರುವುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ನಾಟ್ಯ ಶಾಸ್ತ್ರದ ಪ್ರಕಾರ ಭಾರತದ ನೃತ್ಯಕಲೆಗಳು ಜೀವ ತಳೆದು ಸುಮಾರು 2000 ವರ್ಷಗಳೇ ಸಂದಿದ್ದು ಇಂದಿಗೆ ಅದು ಉಚ್ಛ್ರಾಯ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಸಲು ಹೆಮ್ಮೆಯೆನಿಸುತ್ತಿದೆ.

ಪ್ರಪಂಚದಾದ್ಯಂತ ಇರುವ ನೃತ್ಯಗಾರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸುಮಾರು 3 ತಿಂಗಳಿನಿಂದ ನಡೆಸುವ ತಯಾರಿ ತಾಲೀಮು, ಕಾರ್ಯಾಗಾರ, ಪ್ರಬಂಧ ಮಂಡನೆ, ನೃತ್ಯ ಸ್ಪರ್ಧೆಗಳು, ಏಕವ್ಯಕ್ತಿ ಹಾಗೂ ಗುಂಪು ಪ್ರದರ್ಶನಗಳಿಂದ ಕೂಡಿರುತ್ತದೆ. ಪ್ರತಿಯೊಬ್ಬನಲ್ಲಿ ಅಡಗಿರುವ ನೃತ್ಯ ಕಲಾವಿದನನ್ನು ಜಾಗೃತಗೊಳಿಸಿ ಆತನೂ ಸುತ್ತಲಿನ ಸೌಂದರ್ಯವನ್ನು, ತನ್ನೊಳಗಿನ ಆತ್ಮವಿಶ್ವಾಸವನ್ನು ಬಡಿದೆಬ್ಬಿಸಿ ಒಬ್ಬ ನೈಜ ಮಾನವನನ್ನಾಗಿಸುವ ಹೆಬ್ಬಯಕೆ ಈ ವಿಶ್ವ ಸಂಸ್ಥೆಯದ್ದು. ಭಯೋತ್ಪಾದನೆಯಂತಹ ತೀವ್ರ ಖಂಡನೀಯ ಅವಸ್ಥೆಗಳು ಸುತ್ತಲೂ ಜರುತ್ತಿರುವ ಈ ಸಂದರ್ಭದಲ್ಲಿ ಮನುಷ್ಯನಲ್ಲಿನ ಪಶುತ್ವ ನಾಶವಾಗಿ, ಮನಸಿನ ಮೃದುತ್ವ ಅರಳಲಿ ಎಂಬುದೇ ಈ ವಿಶ್ವ ನೃತ್ಯ ದಿನದ ಸದುದ್ದೇಶ.
ಕೇವಲ ವಿಶ್ವಸಂಸ್ಥೆ ನಡೆಸುತ್ತಿರುವ ನೃತ್ಯ ದಿನ ಇದಾಗದೆ, ನಮ್ಮಲ್ಲಿನ ಪ್ರತಿಯೊಬ್ಬನ ನೃತ್ಯ ಪ್ರತಿಭೆ ಹೊರಹೊಮ್ಮಿ ನಮ್ಮ ಭಾರತೀಯರಿಗೆ ವರದಾನವೆನಿಸಿರುವ ನೃತ್ಯ ಶಿಕ್ಷಣ ಹಾಗೂ ಸಾಂಪ್ರದಾಯಿಕ ಪದ್ಧತಿಗಳು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ನಾವು ಟೊಂಕಕಟ್ಟಿ ನಿಲ್ಲಬೇಕು. ಸರ್ವರೂ ವೇದಿಕೆಯ ಮೇಲುಳಿದರೆ ಚಪ್ಪಾಳೆಗೆ ಜನರಿನ್ನೆಲ್ಲಿ ಎನ್ನುವಂತೆ ಎಲ್ಲರೂ ನೃತ್ಯಗಾರರಾಗಲು ಸಾಧ್ಯವಿಲ್ಲದಿದ್ದರೂ. ಅದನ್ನು ಆಸ್ವಾದಿಸುವ ಮನಃಸ್ಥಿತಿಯನ್ನು ಬೆಳೆಸುವ ನಿಟ್ಟಿನಲ್ಲಿಯೂ ನಾವು ನಮ್ಮ ಮಕ್ಕಳಿಗೆ ಹಿತವಚನ ನೀಡಬೇಕು. ಮಾಲ್’ಗಳಿಗೆ ಹೋಗಿ ಸಿನೆಮಾ ವೀಕ್ಷಿಸುವ ಬದಲು ಇಂದಿನಿಂದ ವರ್ಷದಲ್ಲಿ ಕನಿಷ್ಠ 2 ನೃತ್ಯ ಕಾರ್ಯಕ್ರಮಗಳನ್ನಾದರೂ ರಂಗಮಂದಿರಗಳಿಗೆ ಕುಟುಂಬ ಸಮೇತ ತೆರಳಿ ವೀಕ್ಷಿಸುತ್ತೇವೆಂಬ ಪಣ ತೊಡಬೇಕು. ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಒತ್ತುಕೊಡುವ ಬದಲು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಈ ಕ್ಷಣದಿಂದಲೇ ಶ್ರಮಿಸಿದಲ್ಲಿ ವಿಶ್ವ ನೃತ್ಯ ದಿನದ ಶ್ರಮ ಸಾರ್ಥಕವಾಗುತ್ತದೆ. ಎಲ್ಲರಿಗೂ ವಿಶ್ವ ನೃತ್ಯ ದಿನದ ಶುಭಾಶಯಗಳು.
ಲೇಖನ: ನೃತ್ಯಗುರು ಸಹನಾ ಚೇತನ್
ಸಹಚೇತನ ನಾಟ್ಯಾಲಯ(ರಿ)
ಶಿವಮೊಗ್ಗ









Discussion about this post