ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಣ್ಣದ ಲೋಕದ ಸೆಳೆತ ಸಾಮಾನ್ಯದ್ದಲ್ಲ. ಅದು ಎಲ್ಲರನ್ನೂ ಸೆಳೆಯುತ್ತದೆ, ಆದರೆ ಕೆಲವರಿಗೆ ಮಾತ್ರ ತನ್ನ ಅಂತರಂಗದಲ್ಲಿ ಜಾಗ ಕೊಡುತ್ತದೆ. ದೂರದೃಷ್ಟಿ, ಆಸಕ್ತಿ ಮತ್ತು ನಿರಂತರ ಕಲಿಕೆಯಿದ್ದರೆ ಮಾತ್ರ ಈ ಕ್ಷೇತ್ರದಲ್ಲಿ ಬೆಳೆಯಬಹುದು. ಅಂದಹಾಗೆ ಈ ಮಾತು ಎಲ್ಲ ಕ್ಷೇತ್ರಕ್ಕು ಅನ್ವಯಿಸುತ್ತದೆ.
ಮಳವಳ್ಳಿಯ ನೇಣನೂರು ಎಂಬ ಕುಗ್ರಾಮದಲ್ಲಿ ಬೆಳೆದ ಹುಡುಗನೊಬ್ಬ ಬೆಳೆಯುತ್ತಾ ಹೋದಂತೆ ಸಿನಿಮಾ ಮೇಲಿನ ವ್ಯಾಮೋಹದಿಂದ ಹೇಗಾದರೂ ಒಂದು ವಿಧದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರಬೇಕು ಎಂಬ ಉದ್ದೇಶ ಇಟ್ಟುಕೊಂಡು ಗಾಂಧಿನಗರದತ್ತ ಹೆಜ್ಜೆ ಹಾಕಿ, ಸಣ್ಣ ಪುಟ್ಟ ಕೆಲಸ ಮಾಡಿಕೊಂಡು, ಸಿಕ್ಕ ಸಿಕ್ಕ ಪಾತ್ರಗಳನ್ನು ಮಾಡಿಕೊಂಡು, ಜೊತೆ ಜೊತೆಗೆ ಫೋಟೋಗ್ರಫಿ ಮತ್ತು ಪೋಸ್ಟರ್ ವಿನ್ಯಾಸದ ಬಗ್ಗೆ ಒಲವು ಮೂಡಿಸಿಕೊಂಡು ಎಲ್ಲರ ಅಚ್ಚುಮೆಚ್ಚಿನ ಪ್ರಚಾರ ವಿನ್ಯಾಸಕರಾದ “ರಾಜು ವಿಷ್ಣು” ಅವರ ಕಥೆಯೇ ರೋಚಕ.
ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್ ವಿನ್ಯಾಸಕರ ದಂಡೇ ಇದೆ. ವಿಭಿನ್ನವಾದ ಪೋಸ್ಟರ್ ವಿನ್ಯಾಸ ಮಾಡಿ ಜನರನ್ನು ಸೆಳೆಯುವಂತೆ ಮಾಡುವುದು ಆಯಾ ಪೋಸ್ಟರ್ ವಿನ್ಯಾಸಕಾರರ ಸೃಜನಶೀಲತೆಗೆ ಬಿಟ್ಟ ವಿಚಾರ.
ಅಂದಹಾಗೆ ಸಿನಿಮಾದಲ್ಲಿ ಸಕ್ರಿಯವಾಗಿರಬೇಕು ಎಂಬ ಒಂದೇ ಉದ್ದೇಶದಿಂದ ಗಾಂಧಿನಗರದತ್ತ ಹೆಜ್ಜೆ ಹಾಕಿದ್ದ ರಾಜು ವಿಷ್ಣು ಬೆಂಗಳೂರಿಗೆ ಬಂದ ಹೊಸತರಲ್ಲಿ ಮಾಡಿದ ಕೆಲಸಗಳು ಹಲವಾರು. ಕೆಲವು ಕಾಲ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದು, ಕಲಾ ನಿರ್ದೇಶನದ ತಂಡದಲ್ಲಿ ಕೆಲಸ ಮಾಡಿಕೊಂಡು ಇದ್ದಿದ್ದು, ಸಿಡಿ ಶಾಪ್ ಇಟ್ಟುಕೊಂಡಿದ್ದು, ಸುದೀಪ್, ಚಿರಂಜೀವಿ ಸರ್ಜಾ, ಧ್ರುವ ಹಾಗೂ ಯಶ್ ಸೇರಿದಂತೆ ಹಲವಾರು ನಟರೊಡನೆ ಒಡನಾಟ ಇಟ್ಟುಕೊಂಡಿದ್ದು ಹೀಗೆ ಸಿನಿಮಾಗೆ ಸಂಬಂಧಪಟ್ಟ ಕೆಲಸಗಳಲ್ಲಿ ಭಾಗಿಯಾಗಿ ಜೀವನ ಸಾಗಿಸುತ್ತಿದ್ದರು.
ನಂತರದ ದಿನಗಳಲ್ಲಿ ಕೆಲವು ಹಿರಿಯ ಸಿನಿಮಾ ಪೋಸ್ಟರ್ ವಿನ್ಯಾಸಕರ ಬಳಿ ಸೇರಿ ಪೋಸ್ಟರ್ ವಿನ್ಯಾಸದ ಮಟ್ಟುಗಳನ್ನು ಸ್ವತಃ ನೋಡಿ ತಾವೇ ಕಲಿತುಕೊಂಡರು. ಪಕ್ಕಾ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿರುವ ರಾಜು ವಿಷ್ಣು ಕಲಿಕೆಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಒಂದು ಕೆಲಸ ಕೈಗೆ ಎಟುಕಲಿಲ್ಲ ಅಂದರೆ ಮತ್ತೊಂದು ಕೆಲಸದತ್ತ ದೃಷ್ಠಿ ಹಾಯಿಸುತ್ತಿದ್ದರು ಮತ್ತು ಯಾವುದೇ ಕೆಲಸವನ್ನು ಜತನದಿಂದ ಮಾಡುವ ಮನೋಭಾವ ಅವರನ್ನು ವಿಡಿಯೋಗ್ರಾಫರ್ ನನ್ನಾಗಿಯೂ ಮಾಡಿತು. ಹಾಗೆ ಕೆಲವು ಕಿರುಚಿತ್ರಗಳು, ಮ್ಯೂಸಿಕ್ ಆಲ್ಬಂ ಗಳಿಗೆ ಸಿನಿಮೇಟೋಗ್ರಾಫರ್ ಆಗಿ ಕೆಲಸ ಮಾಡಿದ ಅನುಭವವನ್ನೂ ಪಡೆದುಕೊಂಡರು.
ರಾಜು ವಿಷ್ಣು ಅವರು ಸ್ವಲ್ಪ ಮಟ್ಟಿಗೆ ಪೋಸ್ಟರ್ ವಿನ್ಯಾಸದಲ್ಲಿ ಪಳಗಿದ ನಂತರದ ದಿನಗಳಲ್ಲಿ ಅವರ ಸ್ನೇಹಿತರಿಂದ ಕೆಲವು ಲೋಕಲ್ ಬ್ಯಾನರ್, ಫ್ಲೆಕ್ಸ್ ಗೆ ಸಂಬಂಧಿಸಿದ ಪೋಸ್ಟರ್ ಡಿಸೈನ್ ಮಾಡಿಕೊಡುವಂತೆ ಬೇಡಿಕೆ ಇಡಲು ಶುರು ಮಾಡಿದರು. ಅಂತೆಯೇ ಲೋಕಲ್ ಬ್ಯಾನರ್ಗೆ ಸಿನಿಮಾ ಪೋಸ್ಟರ್ ಶೈಲಿಯ ವಿನ್ಯಾಸ ಮಾಡಿಕೊಟ್ಟು ಸ್ಯೆ ಎನಿಸಿಕೊಂಡರು.
ಬರಬರುತ್ತಾ ಸಿನಿಮಾಗೆ ಕೆಲಸ ಮಾಡುವ ಅವಕಾಶ ಕೂಡ ಸಿಕ್ಕಿತು. ಹಾಗೆ ವಿ. ನಾಗೇಂದ್ರಪ್ರಸಾದ್ ಅವರ ನಿರ್ದೇಶನದ “ಗೂಗಲ್ ” ಸಿನಿಮಾ ಮತ್ತು “ಗುರೂಜಿ” ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳ ಪ್ರಚಾರ ವಿನ್ಯಾಸ ಮಾಡಿದರು. ನಂತರದ ದಿನಗಳಲ್ಲಿ ರಾಜು ವಿಷ್ಣು ಅವರೇ ಪೋಸ್ಟರ್ ವಿನ್ಯಾಸ ಮಾಡಿಕೊಡಬೇಕು ಎಂಬ ಬೇಡಿಕೆ ಬರಲಾರಂಭಿಸಿತು.
ತಮ್ಮ ಆರಂಭದ ದಿನಗಳಲ್ಲಿ ಪ್ರೋತ್ಸಾಹಿಸಿದ ಹಲವಾರು ಸ್ನೇಹಿತರು ಮತ್ತು ವಿಷ್ಣುವರ್ಧನ್ ಅಭಿಮಾನಿಗಳನ್ನು ನೆನೆಸಿಕೊಳ್ಳುವ ರಾಜು ವಿಷ್ಣು ಅವರು ಕೆಂಪೇಗೌಡ, ವಿಷ್ಣುವರ್ಧನ ಮತ್ತು ಮಿಸ್ಟರ್ ಯಂಡ್ ಮಿಸೆಸ್ ರಾಮಾಚಾರಿ ಸಿನಿಮಾದಲ್ಲಿ ಮಾಡಿದ ಸಣ್ಣ ಪಾತ್ರದಿಂದ ಸ್ವಲ್ಪ ಜನ ಗುರುತಿಸುವಂತೆ ಆಗಿದ್ದು ಖುಷಿ ಕೊಡುತ್ತದೆ ಎನ್ನುತ್ತಾರೆ.
ಅಂದಹಾಗೆ ಇತ್ತೀಚೆಗೆ ರವಿ ಡಿ ಚನ್ನಣ್ಣನವರ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳ ಬೇಡಿಕೆಯಂತೆ ರಾಜು ವಿಷ್ಣು ಅವರು ಒಂದು ಪೋಸ್ಟರ್ ವಿನ್ಯಾಸ ಮಾಡಿಕೊಟ್ಟಿದ್ದರು. ಇದನ್ನು ನೋಡಿ ಸ್ವತಃ ರವಿ ಅವರು ತುಂಬಾ ಇಷ್ಟ ಪಟ್ಟು ರಾಜು ವಿಷ್ಣು ಅವರ ಬಗೆಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು, ಈ ವಿಡಿಯೋ ಈಗ ವೈರಲ್ ಆಗಿದೆ.
ಪ್ರಸ್ತುತ ವೀರಕಪುತ್ರ ಶ್ರೀನಿವಾಸ್ ಅವರ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ “ಕನ್ನಡ ಮಾಣಿಕ್ಯ” ಎಂಬ ಪತ್ರಿಕೆಯಲ್ಲಿ ಪ್ರಚಾರ ವಿನ್ಯಾಸಕ, ಸಂಕಲನಕಾರ ಹಾಗೂ ವಿಡಿಯೋ ಗ್ರಾಫರ್ ಆಗಿ ಕೆಲ್ಸ ಮಾಡುತ್ತಿರುವ ರಾಜು ವಿಷ್ಣು, ಸದಾ ಪ್ರೋತ್ಸಾಹಿಸುವ ವ್ಯಕ್ತಿತ್ವ ಇರುವ ಶ್ರೀನಿವಾಸ್ ಅವರಿಂದ ನಾನು ಬಹಳವೇ ಕಲಿತಿದ್ದೇನೆ ಎಂದು ಹೇಳುತ್ತಾರೆ. ವಿಷ್ಣು ಸೇನಾ ಸಮಿತಿ, ಶ್ರೀನಗರ ಶಾಖೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ರಾಜು ವಿಷ್ಣು ಅವರು ದಿವಂಗತ ಚಿರಂಜೀವಿ ಸರ್ಜಾ ಅವರಿಗೆ ವಿಷ್ಣುವರ್ಧನ್ ಅಭಿಮಾನಗಳ ಸಂಘದ ವತಿಯಿಂದ “ಯುವ ಸಾಮ್ರಾಟ್” ಬಿರುದು ನೀಡಿದ ಶ್ರೇಯಾ ಕೂಡ ಇವರಿಗೆ ಸಲ್ಲುತ್ತದೆ.
ಸಿನಿಮಾದಲ್ಲಿ ಹೀರೋ, ವಿಲ್ಲನ್, ಮ್ಯೂಸಿಕ್ ಹೀಗೆ ಎಲ್ಲ ವಿಭಾಗಕ್ಕೂ ಅವಾರ್ಡ್ ಕೊಡುತ್ತಾರೆ ಆದರೆ ಒಂದು ಸಿನಿಮಾಗೆ ಆಕರ್ಷಕವಾದ ಪ್ರಚಾರ ವಿನ್ಯಾಸ ಮಾಡಿ ಜನರಲ್ಲಿ ಆ ಸಿನಿಮಾದ ಬಗ್ಗೆ ಕುತೂಹಲ ಹುಟ್ಟುಹಾಕುವ ವಿನ್ಯಾಸಕರಿಗೆ ಯಾವುದೇ ಐಡೆಂಟಿಟಿ ಇಲ್ಲ ಎಂದು ಬೇಸರಿಸಿಕೊಳ್ಳುವ ರಾಜು ವಿಷ್ಣು ಪ್ರಚಾರ ವಿನ್ಯಾಸಕರಿಗೆ ಸೂಕ್ತ ಐಡೆಂಟಿಟಿ ಸಿಕ್ಕರೆ ನನ್ನಂಥ ಎಷ್ಟೋ ಪ್ರತಿಭೆಗಳು ಹೊರಬರುತ್ತಾರೆ ಎನ್ನುತ್ತಾರೆ.
ಒಂದು ಸಿನಿಮಾವನ್ನು ಥೇಟರ್ ಗೆ ಬರುವ ಮುನ್ನವೇ ಪ್ರೇಕ್ಷಕರ ಗಮನ ಸೆಳೆಯುವಂತೆ ಮಾಡುವ ಹಿಂದೆ ಒಬ್ಬ ಪ್ರಚಾರ ವಿನ್ಯಾಸಕನ ಕನಸು ಮತ್ತು ಕಸುವು ಅಡಗಿರುತ್ತದೆ. ಆ ಪ್ರತಿಭೆಗೆ ನೀರೆರೆದು, ಪೋಷಿಸಿ, ಬೆಳೆಸುವ ಕೆಲಸ ಚಿತ್ರರಂಗದಲ್ಲಿ ಹೆಚ್ಚೆಚ್ಚು ಆಗಲಿ ಜೊತೆಗೆ ರಾಜು ವಿಷ್ಣು ಅವರಂತಹ ಪ್ರತಿಭೆಗಳಿಗೆ ಚಿತ್ರರಂಗ ಗಟ್ಟಿ ನೆಲೆಯಾಗಲೀ ಎಂದು ಆಶಿಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post