ನವದೆಹಲಿ: ಐಎನ್’ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಹಾಗೂ ಇಡಿ ವಿಚಾರಣೆ ಎದುರಿಸುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸುವ ಕ್ರಮಕ್ಕೆ ತಡೆ ನೀಡುವಂತೆ ಚಿದಂಬರಂ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನಿಮಗೆ ಅಗತ್ಯವಿದ್ದರೆ ತಡೆ ನೀಡುವಂತೆ ಸಿಜೆಐ ಅವರಿಗೆ ಅರ್ಜಿ ಸಲ್ಲಿಸಿ ಎಂದು ಸುಪ್ರೀಂ ಕೋರ್ಟ್ ಚಿದಂಬರಂಗೆ ಹೇಳಿದೆ.
ಐಎನ್’ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ನಿನ್ನೆ ವಜಾಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಹಾಗೂ ಇಡಿ ಅಧಿಕಾರಿಗಳು ನವದೆಹಲಿಯಲ್ಲಿರುವ ಚಿದಂಬರಂ ನಿವಾಸಕ್ಕೆ ತೆರಳಿದ್ದರು. ಆದರೆ, ಅಲ್ಲಿ ಚಿದಂಬರಂ ಇಲ್ಲದೇ ಇದ್ದ ಕಾರಣ ಬರಿ ಕೈಯಲ್ಲಿ ವಾಪಾಸು ಬರಬೇಕಾಗಿತ್ತು.
ಆದರೆ, ಪಟ್ಟು ಬಿಡದ ಅಧಿಕಾರಿಗಳು ಇಂದು ಮುಂಜಾನೆಯೇ ಚಿದಂಬರಂ ನಿವಾಸಕ್ಕೆ ತೆರಳಿ ಬೀಡುಬಿಟ್ಟಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಚಿದಂಬರಂ ಬಂಧನವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅಲ್ಲದೇ, ಇಂದು ಮುಂಜಾನೆ ಚಿದಂಬರಂ ನಿವಾಸಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮುಂದಿನ ಎರಡು ಗಂಟೆಗಳ ಒಳಗಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ನೋಟೀಸ್ ನೀಡಿದ್ದಾರೆ.
Discussion about this post