ನವದೆಹಲಿ: ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಶಾಸಕರು ಹಾಗೂ ಸಂಸದರು ಚುಣಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ.
ಈ ಕುರಿತಂತೆ ತೀರ್ಪು ನೀಡಿರುವ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪೀಠ, ಚುನಾವಣೆಗಳಲ್ಲಿ ಕಳಂಕಿತ ರಾಜಕಾರಣಿಗಳ ಸ್ಪರ್ಧೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಆರೋಪ ಸಾಬೀತಾಗುವ ಮೊದಲೇ ಅವರನ್ನು ಆ ಸಾಂವಿಧಾನಿಕ ಹುದ್ದೆಗಳಿಂದ ಅನರ್ಹಗೊಳಿಸಬಾರದು ಎಂದಿದೆ.
ದೋಷಾರೋಪ ಎದುರಿಸುತ್ತಿರುವವರ ಸ್ಪರ್ಧೆಗೆ ನಿರ್ಬಂಧ ಹೇರಬೇಕು ಮತ್ತು ಅಂತಹ ಅಭ್ಯರ್ಥಿಗಳನ್ನು ಅನರ್ಹಗೊಳಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ನೀಡಲಾಗಿದೆ.
ಇನ್ನು ಕಳಂಕಿತ ರಾಜಕೀಯ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ನ ತಮ್ಮ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಬೇಕು. ಮತದಾರರಿಗೆ ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ಕೇಸ್ ಗಳ ಕುರಿತು ಮಾಧ್ಯಮ, ಸಾಮಾಜಿಕ ಜಾಲಾತಣಗಳ ಮೂಲಕ ಮಾಹಿತಿ ನೀಡಬೇಕು ಎಂದು ಮುಖ್ಯನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಕ್ರಿಮಿನಲ್ ಆರೋಪ ಹೊಂದಿದಾಕ್ಷಣ ಸ್ಪರ್ಧಿಸಲು ನಿರ್ಬಂಧ ಹೇರಲು ಸಾಧ್ಯವಿಲ್ಲ . ಆರೋಪ ಸಾಬೀತಾದರೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಲಾಗಿದೆ.
ಕಳಂಕಿತ ರಾಜಕಾರಣಿಗಳ ಸ್ಪರ್ಧೆ ಕುರಿತಂತೆ ಸಂಸತ್ ನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದಿರುವ ಸಿಜೆಐ, ಈ ಕುರಿತು ಕಾನೂನು ರೂಪಿಸಬೇಕು ಎಂದು ಸೂಚಿಸಿದ್ದಾರೆ.
ಇನ್ನು ಜನರೇ ರಾಜಕಾರಣಿಗಳ ಹಣೆಬರಹ ನಿರ್ಧರಿಸಬೇಕು ಎಂದು ಮತದಾರರಿಗೇ ನಿರ್ಧಾರ ಬಿಟ್ಟಿರುವ ನ್ಯಾಯಾಲಯ, ಕಳಂಕ ರಹಿತ ಅಭ್ಯರ್ಥಿಗಳನ್ನು ಚುನಾಯಿಸುವ ಅಧಿಕಾರ ಮತದಾರರಿಗಿರುವುದರಿಂದ ಅವರೇ ಉತ್ತಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದಿದ್ದಾರೆ.















