ಕಲ್ಪ ಮೀಡಿಯಾ ಹೌಸ್ | ಮೈಸೂರು |
ದೇಶ ಕಂಡ ಮಹೋನ್ನತ ತತ್ವಜ್ಞಾನಿ ಪಂಡಿತ್ ದೀನದಯಾಳ್ ಉಪಾಧ್ಯಾಯ #Pandit Deenadayal Upadhyaya ಅವರ ಐತಿಹಾಸಿಕ ಏಕಾತ್ಮ ಮಾನವ್ ದರ್ಶನ ಉಪನ್ಯಾಸದ ಷಷ್ಟ್ಯಬ್ದ ವರ್ಷದ ಅಂಗವಾಗಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ಯತ್ನಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಖಂಡ, ಖ್ಯಾತ ನರ ರೋಗ ತಜ್ಞ ಡಾ. ಸುಶ್ರುತ ಗೌಡ ಟೀಕಾ ಪ್ರಹಾರ ಮಾಡಿದ್ದಾರೆ. “ಇದು ಕಾಂಗ್ರೆಸ್ ಮನಸ್ಥಿತಿಯ ಪ್ರತಿಬಿಂಬ,” ಎಂದು ಅವರು ಲೇವಡಿ ಮಾಡಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಘಟನೆ ಸಾಂಸ್ಕೃತಿಕ ನಗರಿ, ದೇಶ ಭಕ್ತರ ನೆಲ ಎಂದೇ ಗುರುತಿಸಲ್ಪಟ್ಟಿರುವ ಮೈಸೂರಿಗೆ ಕಳಂಕ ತರುವಂತಹುದು ಎಂದು ತಿಳಿಸಿದ್ದಾರೆ.
“ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಈ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ ಹಾಗು ತತ್ವಜ್ಞಾನಿ ಎಂದು ಇಡೀ ಜಗತ್ತೇ ಒಪ್ಪಿಕೊಂಡಿದೆ. ಅವರ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಹಕಾರ ನೀಡುವುದು ಯಾವುದೇ ಪಕ್ಷದ ಕರ್ತವ್ಯ. ಅವರ ಏಕಾತ್ಮ ಮಾನವ್ ದರ್ಶನ ಉಪನ್ಯಾಸ ಹಾಗು ಕಲ್ಪನೆ ಭಾರತೀಯ ನಾಗರಿಕತೆಯ ಶ್ರೇಷ್ಠತೆ ಎತ್ತಿ ಹಿಡಿಯುವಂತಹುದು. “ಕಾಂಗ್ರೆಸ್ಸಿಗರು ತಮ್ಮ ಮನೋ ದಾಸ್ಯದ ರೋಗದಿಂದ ಹೊರ ಬರಲು ಪಂಡಿತ್ ಅವರ ಬರಹಗಳನ್ನು ಹೆಚ್ಚು ಹೆಚ್ಚು ಓದಬೇಕಿದೆ,” ಎಂದು ಅವರು ತಿಳಿಸಿದ್ದಾರೆ.
“ಕಾಂಗ್ರೆಸ್ ಪಕ್ಷಕ್ಕೆ ಭಾರತೀಯತೆ ಎಂದರೆ ಅದೇನೋ ಅಲರ್ಜಿ. ಈ ಕಾರಣಕ್ಕೆ ಭಾರತ, ಭಾರತೀಯತೆ ಕುರಿತ ಎಲ್ಲಾ ಕಾರ್ಯಕ್ರಮಗಳಿಗೆ ಅದು ಅಡ್ಡಿ ಉಂಟು ಮಾಡುತ್ತಿದೆ,” ಎಂದು ಅವರು ಆರೋಪಿಸಿದರು. ಇಡೀ ದೇಶದ ಉದ್ದಗಲಕ್ಕೂ ಇಂದು ಕಾಂಗ್ರೆಸ್ ಪಕ್ಷ ಜನರಿಂದ ತಿರಸೃತಗೊಳ್ಳಲು ಇದೆ ಕಾರಣ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
“ದೇಶದ ಶಿಕ್ಷಣ ಪದ್ದತಿಯಲ್ಲಿ ಭಾರತೀಯತೆಯನ್ನು ಅಳವಡಿಸಿಕೊಳ್ಳದಿದ್ದರೆ, ಮುಂದಿನ ಜನಾಂಗ ಆತ್ಮ ಗೌರವವಿಲ್ಲದೆ ಬದುಕ ಬೇಕಾಗಿ ಬರಬಹುದು. ದುರಂತವೆಂದರೆ, ಕಾಂಗ್ರೆಸ್ ಪಕ್ಷ ಇದಕ್ಕೆ ವಿರುದ್ಧವಾಗಿ ಸಾಗುತ್ತಿದೆ,” ಎಂದು ಅವರು ಟೀಕಿಸಿದರು.
“ಕಾಂಗ್ರೆಸ್ ಪಕ್ಷ ಆತ್ಮಾವಲೋಕನಕ್ಕೆ ಇದು ಸಕಾಲ. ರಾಜ್ಯದ ರಾಜ್ಯಪಾಲರು, ಕೇಂದ್ರ ಶಿಕ್ಷಣ ಸಚಿವರು ಭಾಗವಹಿಸುತ್ತಿರುವ ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಲು ಯತ್ನಿಸುವ ಮೂಲಕ, ಕಾಂಗ್ರೆಸ್ ಪಕ್ಷ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿ ಮಾಡಿದೆ,” ಎಂದು ಅವರು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















