ಮಲೆನಾಡಿನಲ್ಲಿ ಅರಣ್ಯವನ್ನು ತನ್ನಲ್ಲಿ ಹಾಸಿ ಹೊದ್ದುಕೊಂಡಿರುವ ಭದ್ರಾವತಿ ಬಳಿಯ ಉದ್ದಾಮ ಕ್ಷೇತ್ರದ ಸನಿಹ ಅರಣ್ಯ ಪ್ರದೇಶದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿನಿಯರು ಶ್ರಮದಾನ ಮಾಡಿದರು. ಈ ವೇಳೆ ಸೀಡ್ ಬಾಲ್ ಬಿತ್ತನೆ ಮಾಡಲಾಯಿತು. ಇಲ್ಲಿನ ಅನುಭವವನ್ನು ಇದರಲ್ಲಿ ಪಾಲ್ಗೊಂಡ ಶಿವಮೊಗ್ಗದ ನಾಗರಾಜ ಶೆಟ್ಟರ್ ಅವರ ಪದಗಳಲ್ಲೇ ಓದಿ…
ನಮ್ಮ ಅಕ್ಕಪಕ್ಕದಲ್ಲೇ ಡಾರ್ಜಿಲಿಂಗ್, ಅಸ್ಸಾಂ, ಸಿಕ್ಕೀಂ, ಕಾಶ್ಮೀರ, ಶಿಮ್ಲಾ ಇತ್ಯಾದಿಗಳಿರುವಾಗ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಸೆಳೆಯಿತೇ ಮನ” ಎಂಬ ಮಾತು ಸತ್ಯ ಎಂದೆನಿಸಿತು.
ಹೌದು ಈ ಸಾಲಿನ ಬಿಜದುಂಡೆ ಬಿತ್ತನೆ ಕಾರ್ಯಕ್ರಮದ ಬಹುಶಃ ಕಡೆಯ ದಿನವಾದ ಇಂದು ಗಂಗೂರು ಉದ್ಧಾಮ ಕ್ಷೇತ್ರದ ಬೆಟ್ಟದಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವುದರೊಂದಿಗೆ ಯಶಸ್ವಿಯಾಗಿ ನೆರವೇರಿತು.
ಪ್ರಕೃತಿಯ ಮಡಿಲಲ್ಲಿ ದಟ್ಟ ಕಾನನದ ಮದ್ಯೆ ‘ಉದ್ಧಾಮ ಕ್ಷೇತ್ರದ ಬೃಹತ್ ಬಂಡೆಯಲ್ಲಿ ಒಡಮೂಡಿದ ಹನುಮನ ಮೂರ್ತಿ ನೋಡಿದಾಕ್ಷಣ ಎಲ್ಲರೂ ಮೈಮರೆಯುವುದು ಖಂಡಿತ. ಮತ್ತೆಲ್ಲಿಯೂ ಕಾಣಸಿಗದ ಸಿರಿ ಸೌಂದರ್ಯದ ಪ್ರಕೃತಿ ತಾಣದಲ್ಲಿ ಇಂದಿನ ಕ್ಷಣಗಳನ್ನು ಕಳೆದದ್ದು ಮಾತ್ರ ಮರೆಯಲಾಗದ್ದು.
ಸುಮಾರು ಇಪ್ಪತ್ನಾಲ್ಕು ಹುಡುಗಿಯರ ಟೀಂ ನಿಭಾಯಿಸಲು ಬಾಲಣ್ಣ ನನಗೆ ಹೇಳಿದಾಗ ಅದು ಸುಲಭದ ಕೆಲಸ ಎಂದು ಹೊರಟ ನನಗೆ ಮರಳಿ ಬಂದಾಗ ಅನಿಸಿದ್ದು, ಕಪ್ಪೆಗಳನ್ನಾದರೂ ತಕ್ಕಡಿಗೆ ಹಾಕಬಹುದು ಆದರೆ ಈ ಹುಡುಗಿಯರನ್ನು ಸೆಲ್ಫೀ ಗೀಳಿನಿಂದ ಹೊರತರಲು ಸಾಧ್ಯವಾಗದು ಎಂದು. ವಹಿಸಿದ ಕೆಲಸ ಪೂರೈಸಲೇಬೇಕಾದ ಅನಿವಾರ್ಯತೆಯಿಂದ ಪ್ರತಿ ಅರ್ಧ ಘಂಟೆಗೊಮ್ಮೆ “ಸೆಲ್ಫೀ ಬ್ರೇಕ್” ಘೋಷಿಸಿದ ಮೇಲೆ ಪರಿಸ್ಥಿತಿ ಹತೋಟಿಗೆ ಬಂದದ್ದು.
ಏನೇ ಆಗಲಿ NSS ನ ಮೊದಲ ವರ್ಷದ ಶ್ರಮದಾನ ಈ ವಿದ್ಯಾರ್ಥಿನಿಯರಿಗೂ ಬಹಳ ವಿಶೇಷವಾಗಿತ್ತು ನನಗೂ ವಿಶೇಷವಾಗಿತ್ತು.
Discussion about this post