ಕನ್ನಡ ಚಿತ್ರರಂಗಕ್ಕೆ ಜಲೀಲನಾಗಿ ಎಂಟ್ರಿ ಕೊಟ್ಟ ಅಮರನಾಥ್ ಅಲಿಯಾಸ್ ಅಂಬರೀಶ್ ಅಗಲಿಕೆ ಇಡಿಯ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನು ನೀಡಿದೆ.
1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ನಾಯಕ ನಟರಾಗಿದ್ದರು. ನಾಯಕನಟರಾಗಿ ವಿಷ್ಣುಗೂ ಸಹ ಅದು ಮೊದಲ ಚಿತ್ರ. ಇದೇ ತಂಡದೊಂದಿಗೆ ಸೇರಿಕೊಂಡು ಇಂದಿಗೂ ತಮ್ಮ ಮೊದಲ ಪಾತ್ರದ ಮೂಲಕವೇ ಚಿತ್ರರಸಿಕ ಮನಸ್ಸಿನಲ್ಲಿ ನೆಲೆಸಿರುವ ಅಂಬರೀಶ್ ವಿಷ್ಣು ಅವರೊಂದಿಗೆ ಆತ್ಮೀಯ ಸ್ನೇಹವನ್ನು ಬೆಳೆಸಿಕೊಂಡರು.
ಅದು ಅಂಬರೀಶ್ ಇನ್ನೂ ಸಹ ಪಾತ್ರಗಳು ಹಾಗೂ ಕಳನಟನ ಪಾತ್ರಗಳಲ್ಲಿ ನಟಿಸುತ್ತಿದ್ದ ಕಾಲ. ಆದರೆ, ಆಗಲೇ ವಿಷ್ಣು ಸ್ಟಾರ್ ನಟರಾಗಿ ಬೆಳೆದಿದ್ದರು. ಆದರೆ, ಇಬ್ಬರ ಸ್ನೇಹ ಚಿತ್ರರಂಗವನ್ನು ಮೀರಿ ಗಟ್ಟಿಗೊಂಡಿತ್ತು. ಆನಂತರದ ಕಾಲದಲ್ಲಿ ಅಂಬರೀಶ್ ಸಹ ಸ್ಟಾರ್ ನಟರಾಗಿ ಬೆಳದ ನಂತರ ಕನ್ನಡ ಚಿತ್ರರಂಗದಲ್ಲಿ ಇಬ್ಬರೂ ಏಕಕಾಲದಲ್ಲಿ ಮುನ್ನುಗ್ಗುತ್ತಿದ್ದರು. ಆದರೆ, ಇಬ್ಬರು ಸ್ನೇಹ ಎಷ್ಟಿತ್ತು ಎಂದರೆ, ಎಂದಿಗೂ ಸಹ ಇಬ್ಬರ ನಡುವೆ ತಮ್ಮ ಚಿತ್ರ ಮಾತ್ರ ಗೆಲ್ಲಬೇಕು ಎಂಬ ಭಾವನಯಾಗಲೀ, ಈಗೋ ಆಗಲಿ ಕಾಣಿಸಿಕೊಳ್ಳಲೇ ಇಲ್ಲ ಎಂಬುದು ವಿಶೇಷ.
ನಾಗರಹಾವು ಚಿತ್ರದಿಂದ ಆರಂಭವಾದ ವಿಷ್ಣು-ಅಂಬಿ ಸ್ನೇಹವನ್ನು ಇಡಿಯ ಭಾರತೀಯ ಚಿತ್ರರಂಗವೇ ಅಪಾರವಾಗಿ ಮೆಚ್ಚಿಕೊಂಡಿತ್ತು.
ಈ ಇಬ್ಬರು ನಟರ ಸ್ನೇಹದ ಪ್ರತೀಕದಂತೆ 2001ರಲ್ಲಿ ತೆರೆಕಂಡ ದಿಗ್ಗಜರು ಚಿತ್ರ ಅತ್ಯಂತ ಯಶಸ್ವಿಯಾಗಿತ್ತು. ಇಡಿಯ ಚಿತ್ರ ಕೇವಲ ಒಂದು ಚಿತ್ರ ಮಾತ್ರವಾಗಿರದೇ ಇಬ್ಬರ ನಡುವಿನ ಸ್ನೇಹವನ್ನು ಸಾರಿ ಸಾರಿ ಹೇಳುತ್ತಿತ್ತು.
ಆದರೆ, 2009ರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಏಕಾಏಕಿ ಇಹಲೋಕ ತ್ಯಜಿಸಿದರು. ತಮ್ಮ ಜೀವದ ಗೆಳೆಯನ ಅಗಲಿಕೆಯ ಆಘಾತದಲ್ಲಿದ್ದ ಅಂಬರೀಶ್ ಅದನ್ನು ಎಲ್ಲೂ ಸಹ ತೋರಿಸಿಕೊಳ್ಳದೇ, ವಿಷ್ಣು ಅವರ ಅಂತಿಮ ಯಾತ್ರೆ, ಅಂತ್ಯಸಂಸ್ಕಾರದ ಸಂಪೂರ್ಣ ಉಸ್ತುವಾರಿ ನೋಡಿಕೊಂಡು, ಅತ್ಯಂತ ಶಿಸ್ತುಬದ್ದವಾಗಿ ನಡೆಯುವಂತೆ ನೋಡಿಕೊಂಡರು.
ವಿಷ್ಣು ನಿಧನದ ದುಃಖದಲ್ಲಿ ಇಡಿಯ ರಾಜ್ಯ ಮುಳುಗಿದ್ದ ಆ ಸಂದರ್ಭದಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕಾದ ಜವಾಬ್ದಾರಿಯನ್ನು ಸ್ವತಃ ತಾವೇ ತೆಗೆದುಕೊಂಡಿದ್ದು ವಿಶೇಷ.
ಅಂದು ತಮ್ಮ ಜೀವದ ಗೆಳೆಯನನ್ನು ಕಳೆದುಕೊಂಡಿದ್ದ ಅಂಬರೀಶ್ ಅವರ ಮನದಲ್ಲಿ ಆ ನೋವು ಶಾಶ್ವತವಾಗಿ ಉಳಿದಿತ್ತು. ಆದರೆ, ಈಗ ತಮ್ಮ ಕುಚಿಕೂ ನೆಲೆಸಿರುವ ಲೋಕಕ್ಕೇ ತೆರಳಿರುವ ಜಲೀಲ ಚಿತ್ರರಂಗ ಮಾತ್ರವಲ್ಲ ರಾಜ್ಯಕ್ಕೇ ಸ್ನೇಹ ಸಂಬಂಧದ ಬೆಲೆಯನ್ನು ತಿಳಿಸಿಕೊಟ್ಟು ಹೋಗಿದ್ದಾರೆ.
Discussion about this post