ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
2001ನೆಯ ಇಸವಿಯಲ್ಲಿ ಆಗಿನ್ನೂ ಐದು ವರ್ಷ ತುಂಬಿ ದಾಪುಗಾಲು ಹಿಡುತ್ತಿದ್ದ ಹಾಯ್ ಬೆಂಗಳೂರು ಪತ್ರಿಕೆ ಹೆಸರು ಕೇಳಲಿಕ್ಕೆ ಒಂದ್ ತರ ವಿಬಿನ್ನವಾಗಿತ್ತು. ಎಂಟನೇಯ ತರಗತಿ ಹುಡುಗ ನೀನು ಈ ರವಿ ಬೆಳಗೆರೆಯ ಪತ್ರಿಕೆ ಓದಬಾರದು ಅಂತ ಬಿಡಿಸಿದ್ರು ನಮ್ಮ ಹೈಸ್ಕೂಲ್ ಮೇಷ್ಟ್ರು. ಆದರೆ ಅವತ್ತು ಅಷ್ಟಕ್ಕೆ ಸುಮ್ಮನಾಗಲಿಲ್ಲ ಮೇಷ್ಟ್ರು ಆತ ಬ್ಲಾಕ್ ಮೇಲ್ ಮಾಡಿ ಡೀಲ್ ಮಾಡ್ತಾನಂತೆ. ಪತ್ರಿಕೇಲಿ ಬರೆಯೋ ಮುಂಚೆ ಅವರಿಗೆಲ್ಲ ವಾರ್ನ್ ಮಾಡಿ ಬಗ್ಗಿಲ್ಲ ಅಂದರೆ ಚಿತ್ರ-ವಿಚಿತ್ರವಾಗಿ ವೈಭವಿಕರಿಸಿ ಬರೆಯುತ್ತಾನೆ.
ಭೂಗತ ಲೋಕದ ದುರಂತ ನಾಯಕರ ಬಗ್ಗೆ ವಿಜೃಂಭಿಸಿ ಸಿನಿಮಾ ನಾಯಕನಂತೆ ಬಿಲ್ಡ್ ಆಫ್ ಕೊಟ್ಟು ಭೂಗತ ಜಗತ್ತಿನ ದೊರೆಯೆಂದು ಬಿಂಬಿಸ್ತಾನೆ. ಪತ್ರಿಕೆ ಅಂದ್ರೆ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ. ಸಮಾಜದ ಸ್ವಾಸ್ಥ್ಯ ಕಾಪಾಡುವಂತೆ ಸುದ್ದಿ ಸಮಾಚಾರಗಳನ್ನು ಬಿತ್ತರಿಸಬೇಕು ಅಂತ್ತೇಲ್ಲ ಉಪದೇಶ ನೀಡಿ, ಕೈಯಲ್ಲಿದ್ದ ಹಾಯ್ ಬೆಂಗಳೂರು ಪತ್ರಿಕೆಯನ್ನು ಕಸಿದುಕೊಂಡು ಹೋದ ಅದೇ ಮೇಷ್ಟ್ರು ಒಂದು ಪುಟವನ್ನು ಉಳಿಸದೇ ಲೀಸರ್ ಸಮಯದಲ್ಲಿ ಅ ಪತ್ರಿಕೆಯನ್ನು ಓದಿದ್ದು ಇತಿಹಾಸ. ಇಲ್ಲಿ ವಿಷಯ ಏನ್ ಅಂದರೆ ಲ್ಯಾಡ್ ಲೈನ್ ಕಾಲದಲ್ಲಿ ಯಾರ್ ಹೇಳ್ತಿದ್ರೋ ಗೊತ್ತಿಲ್ಲ. ರವಿ ಬೆಳಗೆರೆ ಬಗ್ಗೆ ಆಗಲೇ ಅಂತೆ ಕಂತೆಗಳ ಸೂರಿಮಳೆ ಕೇಳಲಿಕ್ಕೆ ರೋಚಕವೆನಿಸುತಿತ್ತು.
ರವಿ ಬೆಳಗೆರೆಯ ಕಾದಂಬರಿಗಳನ್ನು ಹದಿಹರೆಯದ ವಯಸ್ಸಿನಲ್ಲಿ ಓದಬಾರದು ಅಂತ ಸ್ವತಃ ಅನಿಸಿದೆ. ಕಾರಣ ಕಾದಂಬರಿ ಓದಿ ಮುಗಿಸಿದ ಮೇಲೆ ಅಮಲಿನಲ್ಲಿ ತೇಲಿದಂತ್ತಾಗುವ ಅ ದಿನಗಳು ನೆನೆದರೇ ಬೇಕಿತ್ತು. ಆ ಭಾವಗಳ ವೈಪರಿತ್ಯ ಆಗ ಎಂದು ಸ್ಪಷ್ಟವಾಗುತ್ತೆ. ಚಿವುಟಿದಷ್ಟು ಚಿಗುರು ಕವಲೊಡೆದಾಗೆ ಓದಿದಷ್ಟು ಓದುಗನಿಗೆ ನವ ಉಲ್ಲಾಸವನ್ನೊದಗಿಸುವ ಅಕ್ಷರ ಪುಂಜಗಳು ಪುಂಕಾನುಪುಂಕವಾಗಿ ಜೋಡಿಸುವ ನುಡಿ ಬ್ರಹ್ಮನ ಕೈಚಳಕಕ್ಕೆ ಮನಸೋಲದವರಿಲ್ಲ. ಇಂದಿಗೂ ಕಾಡುವ ಕಾದಂಬರಿಗಳಾದ ಹೇಳಿ ಹೋಗು ಕಾರಣ, ನೀ ಹಾಂಗೆ ನೋಡ ಬೇಡ ನನ್ನ ಮತ್ತು ಹಿಮಾಲಯನ್ ಬ್ಲಂಡರ್, ಟೈಮ್ ಪಾಸ್, ಬಾಟಮ್ ಐಟಂ ಹೀಗೆ ಹಲವು ಬಗೆಯ ಬರವಣಿಗೆಯ ಪ್ರಕಾರಗಳು ಪ್ರತಿ ಕ್ಷಣ ನಮ್ಮೊಂದಿಗೆ ರವಿ ಇದ್ದಾರೆ ಅನಿಸುವ ಸಂಗಾತ್ಯ ನೀಡುತ್ತವೆ.
ಅವರ ಸುಮಾರು ಒಂದು ಗಂಟೆಯ ಧ್ವನಿ ಮದ್ರಣವಾದ ಓ ಮನಸೇ ಕರ್ನಾಟಕದ ಅರ್ಧದಷ್ಟು ಜನ ಕೇಳಿರಬಹುದು. ನಾವು 2007 ರಲ್ಲಿ ಡಿಗ್ರಿ ಓದುವಾಗ ರವಿ ಬೆಳಗೆರೆಯ ಧ್ವನಿಯಲ್ಲಿ… ಪ್ರೀಯ ಸ್ನೇಹಿತರೇ ರವಿ ಬೆಳಗೆರೆ ನಮಸ್ಕಾರಗಳು, ವೃತ್ತಿಯಿಂದ ನಾನೊಬ್ಬ ಪತ್ರಕರ್ತ, ಬರವಣಿಗೆ ನನ್ನ ಫಸ್ಟ್ ಲವ್, ಉಳಿದಾಗೆ ಟಿವಿ ಮತ್ತು ರೇಡಿಯೋದಲ್ಲಿ ಮಾತಾಡ್ತೀನಿ, ಕಾರ್ಯಕ್ರಮಗಳನ್ನು ನಡೆಸಿಕೊಡ್ತೀನಿ, ಸಿನಿಮಾಗಳಲ್ಲಿ ಸೀರಿಯಲ್’ಗಳಲ್ಲಿ ಆಗೊಂದು-ಈಗೊಂದು ಪಾತ್ರ ಮಾಡ್ತಾ ಇರ್ತಿನಿ. ಪ್ರಾಥನಾ ಅಂತ ಒಂದು ನಡೆಸ್ತೀನಿ. ಕಾರ್ಗಿಲ್ ಅಲ್ಲಿ ಯುದ್ಧ, ಗುಜರಾತ್ ಅಲ್ಲಿ ಭೂಕಂಪ, ಒರಿಸ್ಸಾದಲ್ಲಿ ಚಂಡಮಾರುತ, ಆಫ್ಘಾನಿಸ್ತಾನದಲ್ಲಿ ಸಮರ ಹೀಗೆ ಎಲ್ಲೆಲ್ಲಿ ಮನುಷ್ಯ ಸಂಕುಲ ಸಂಕಟಕ್ಕೆ ಬಿತ್ತೋ ಅಲ್ಲಿಗೆಲ್ಲಾ ಹೋಗಿ ಮಾನವನ ಆರ್ತನಾದವನ್ನು ಕೇಳಿಸಿಕೊಂಡು ಬಂದು ಪ್ರಪಂಚಕ್ಕೆ ತಿಳಿಸೋ ಪ್ರಯತ್ನ ಮಾಡಿದ್ದೀನಿ ಅಂತ ತನ್ನ ಜೀವಮಾನದ ಸಾಧನೆಯ ಬಯೋಡಾಟ ನೀಡುತ್ತಿದದ್ದು ಇಂದಿಗೂ ಗುನುಗುನಿಸುತ್ತದೆ. ನಾವೆಲ್ಲ ನಮ್ಮ ಸಿವಿಯಲ್ಲಿ ಮೇಲಿನ ಒಂದರಲ್ಲಿ ಪ್ರಾವೀಣ್ಯತೆ ಪಡೆದಿರಬಹುದು ಅಥವಾ ಪಡೆದರೇ ಧನ್ಯರು. ಆದರೆ ಬೆಳಗೆರೆ ಬಹುಮುಖ ವ್ಯಕ್ತಿತ್ವದ ದುಬಾರಿ ಮನುಷ್ಯ. ಚಿಕ್ಕಪುಟ್ಟದಾಗೆ ಕೈಗೆಟುವವರೇ ಅಲ್ಲ.
ಸುದ್ದಿ ಮಾಧ್ಯಮಗಳ ಹಾವಳಿ ಹೆಚ್ಚುತ್ತಾ ಬಂದ ಸಂದರ್ಭ 2012ರಲ್ಲಿ ಭೀಮಾ ತೀರದಲ್ಲಿ ಎಂಬ ಸಿನಿಮಾ ವಿಷಯವಾಗಿ ಅವಶ್ಯಕತೆ ಮೀರಿ ಸಿನಿಮಾ ಮಂದಿ ರವಿ ಅವರನ್ನು ಟಾರ್ಗೆಟ್ ಮಾಡಿ ಬಿಟ್ಟರು. ಆದಾದ ಮೇಲೆ ಸುನೀಲ್ ಹೆಗ್ಗರವಳ್ಳಿ ಎಂಬ ಪತ್ರಕರ್ತ ಸಹ ರವಿ ಅವರನ್ನು ಜೈಲಿಗೆ ಕಳಿಸುವಷ್ಟು ಹುನ್ನಾರಗಳನ್ನು ಮಾಡಿದ. ಇದೆಲ್ಲವನ್ನು ತನ್ನದೇ ಆದ ಶೈಲಿಯಲ್ಲಿ ಎದುರಿಸಿ ಕೊಡಬೇಕಾದ ಜಾಗದಲ್ಲಿ ಕೊಟ್ಟ ಉತ್ತರದಿಂದ ಸಮಸ್ಯೆಯಿಂದ ಹೊರಬರುವ ಸುಳಿವು ಹುಡುಕಿಕೊಂಡ ರೀತಿ ನಿಜಕ್ಕೂ ಅದ್ಬುತವೇ ಸರಿ.
ಓ ಮನಸೇ ಓದುವಾಗ ರವಿ ಬೆಳಗೆರೆ ತುಂಬ ಭಾವಜೀವಿ ಎಂದು ತಿಳಿದಿತ್ತು. ವೀಣಾಧರಿ ಎಂಬ ಎಚ್’ವಿ ಸೋಂಕಿತೆಯನ್ನು ವೀಣಾಕ್ಕ ಎಂದು ಆಕೆಯ ಕೊನೆಯುಸಿರಿನ ತನಕ ಕಾಪಾಡಿ ಯೋಗ್ಯ ಬದುಕನ್ನು ರೂಪಿಸಿಕೊಟ್ಟರು. ತಾನು ಒಬ್ಬನೇ ಮಗ ಆದರೂ ಆತ ತಂಗಿ-ತಮ್ಮ, ಅಕ್ಕ-ಅಣ್ಣ, ಅಜ್ಜಿ-ಅಮ್ಮನಂತಹ ಸಾಮಾಜಿಕ ಸ್ತರದ ಎಲ್ಲ ಸಂಬಂಧಗಳನ್ನು ಸೃಷ್ಟಿಸಿಕೊಂಡು ಜೀವಿಸುವ ಮಾನವೀಯ ಮಾರ್ತಿ. ನಾವೆಲ್ಲ ನೋಡಿರ್ತಿವಿ ಒಬ್ಬ ವ್ಯಕ್ತಿ ಬೆಳೆದ ಅಂದ್ ಕೂಡಲೇ ಯಾವನೂ ನಿಯತ್ತಾಗಿ ದುಡಿದ್ರೆ ಉದ್ದಾರ ಆಗೋಕೆ ಸಾಧ್ಯ ಇಲ್ಲ ನಂಬರ್-2 ದಂದೆ ಮಾಡಿದ್ರೇ ಮಾತ್ರ ಬೆಳೆಯೋಕೆ ಸಾಧ್ಯ ಅಂತ ಹೇಳೊದನ್ನ ಕೇಳಿರ್ತಿವಿ. ಹೇಗಾದರೂ ಬೇಳಿಲಿ, ವ್ಯಾಖ್ಯಾನಗಳು ಆಯಾಯ ಕಾಲಕ್ಕೆ ಬದಲಾಗಬಹುದು ಸರಿ ತಪ್ಪುಗಳ ಸ್ವರೂಪ ನಿರಂತರ ರೂಪಾಂತರವಾಗಬಹುದು. ಇದೆಲ್ಲಕ್ಕಿಂತ ಹೆಚ್ಚಿನದು ತನಗೆ ಶಕ್ತಿ ಸಾಮಾರ್ಥ್ಯಗಳು ಇದ್ದಾಗ ಅವಕಾಶಗಳು ಸಿಕ್ಕಾಗ ಬಳಸಿಕೊಂಡು ಕೈಲಿ ಆದಷ್ಟು ಒಳ್ಳೆಯದನ್ನು ಮಾಡಿದವರು ರವಿ ಬೆಳಗೆರೆ.
ನಾವೆಲ್ಲ ನೋಡಿರುವಂತೆ ಸಾಹಿತಿ ಅಂದರೆ ಜುಬ್ಬ ಹಾಕಿರಬೇಕು. ಯಾವಾಗಲೂ ಕನ್ನಡದ ಪರವಾಗಿ ಮಾತಾಡ್ತಾ ಇರಬೇಕು. ಕನ್ನಡ ನಾಡು-ನುಡಿ ಬಗ್ಗೆ ಭಾಷಣ ಮಾಡಬೇಕು. ಸಾಹಿತಿಗಳಿಗೆ ಬಡತನ ಕುಂಚವಾದರೂ ಇರಬೇಕು. ಸಾಹಿತಿ ಅಂದರೆ ದುಡ್ಡಿನ ಬಗ್ಗೆ ವೈರಾಗ್ಯ ಬಂದವರಂತಿರಬೇಕು. ಎಡಕ್ಕೊ – ಬಲಕ್ಕೋ ವಾಲಿರಬೇಕು. ಬ್ಯುಸಿನೆಸ್ ಕಡೆ ಅಸಕ್ತಿ ಇರಲೇಬಾರದು. ಪ್ರಶಸ್ತಿ ಬಂದಾಗ ತಿರಸ್ಕಾರಿಸಿ ಸುದ್ದಿ ಆಗಿ ಅದೇ ಪ್ರಶಸ್ತಿಯ ಪುರಸ್ಕಾರಗಳನ್ನು ಮನೆಗೆ ತರಿಸಿಕೊಳ್ಳಬೇಕು. ಸಾಹಿತಿ ಜನಸಾಮಾನ್ಯರು ಬದುಕುವಂತೆ ದಿನನಿತ್ಯದ ಗೋಜಲಿನಿಂದ ಮೀರಿ ಹಸಿವಿದ್ದರೂ ಹೊಟ್ಟೆ ಹಸಿವಿಲ್ಲವೆಂಬಂತೆ ಅಭಿನಯಿಸಬೇಕು. ಇವೆಲ್ಲವನ್ನೂ ಮೀರಿದ ರವಿ ಬೆಳಗೆರೆ ತನಗೆ ಹೇಗೆ ಬೇಕು ಹಾಗೆ ಬದುಕಿದ ಅಜಾತ ಶತ್ರು. ಕೇವಲ 62 ವರ್ಷ ಬದುಕಿದ ಬೆಳಗೆರೆ ವೈಯಕ್ತಿಕ ಜೀವನವನ್ನು ರೋಚಕವಾಗಿ ಕುತೂಹಲಕಾರಿಯಾಗಿ ಬದುಕಿ ತೋರಿಸಿದ್ದಾರೆ.

ಅನಿಸಿದನ್ನು ಮಾಡಿ ಬೇಡವಾದದ್ದನ್ನು ಖಂಡಿಸಿ ಸಾತ್ವಿಕರಿಗೂ ಒಳಗೊಳಗೆ ಭಯ ಹುಟ್ಟಿಸಿ ಬದುಕಿನ ಪಯಾಣವನ್ನು ಮುಗಿಸಿದರು ರವಿ. ಉದಯವಾಗುವ ಮುನ್ನ ಅಸ್ತಂತ ಎಂಬ ಸುದ್ದಿ ಕೇಳಿ ಮನಸ್ಸಿಗೆ ಶೋಕ ಸಾಗರದ ಅಲೆ ಅಬ್ಬಳಿಸಿವೆ. ರವಿ ಬೆಳಗೆರೆಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಕಾಣದ ದೇವರಿಗೆ ಅನಂತ ಅನಂತ ಮನವಿ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post