ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಾದ್ಯಂತ ಎಲ್ಲಾ ಸಿನಿಮಾ ಥಿಯೇಟರ್’ಗಳಲ್ಲಿ ಪ್ರತಿ ಟಿಕೇಟ್ ಬೆಲೆಯನ್ನು 200 ರೂಪಾಯಿಗೆ ನಿಗದಿಪಡಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ, ಮಲ್ಟಿಪ್ಲೆಕ್ಸ್ ಹಾಗೂ ಹೊಂಬಾಳೆ ಫಿಲ್ಸ್ಂ ಹೈಕೋರ್ಟ್ ಮೊರೆ ಹೋಗಿತ್ತು. ಇದನ್ನು ಪರಿಗಣಿಸಿದ ಹೈಕೋರ್ಟ್ ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ನೇತೃತ್ವದ ಪೀಠವು, ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಜೊತೆಗೆ ವಿಚಾರಣೆಯನ್ನು ಮುಂದೂಡಿದೆ.
ಪರಭಾಷಾ ಸಿನಿಮಾಗಳ ಹಾವಳಿ, ಮಿತಿ ಮೀರಿದ ಟಿಕೆಟ್ ದರದ ವಿರುದ್ಧ ಇಡೀ ಇಂಡಸ್ಟ್ರಿ ಏಕರೂಪ ಟಿಕೆಟ್ ದರ ನಿಗದಿ ಮಾಡಬೇಕು ಎಂದು ದಶಕಗಳಿಂದ ಹೋರಾಟ ನಡೆದಿತ್ತು. ಹತ್ತಾರು ಬಾರಿ ಈ ವಿಚಾರವಾಗಿ ಚರ್ಚೆ, ವಾದ-ಪ್ರತಿವಾದಗಳು ನಡೆದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಏಕರೂಪದ ಟಿಕೆಟ್ ದರ ನಿಗದಿ ಮಾಡಿತ್ತು.
ಅಲ್ಲದೇ, ಟಿಕೇಟ್ ದರವನ್ನು 200 ರೂ.ಗೆ ನಿಗದಿ ಮಾಡಿದ್ದಕ್ಕೂ ಸಹ ಭಾರೀ ವಿರೋಧ ವ್ಯಕ್ತವಾಗಿತ್ತು. ಪ್ರಮುಖವಾಗಿ ದೊಡ್ಡ ಬಜೆಟ್ ಚಿತ್ರಗಳಿಗೆ ಇದರಿಂದ ತೊಂದರೆಯಾಗಲಿದೆ ಎಂದು ಆರೋಪಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























