ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಸ್ವಾತಂತ್ರ ಹೋರಾಟದ ಮಹಾನಾಯಕ ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಆದರ್ಶಕ್ರಮಗಳನ್ನು ಮೊದಲು ಅನುಸರಿಸಿ ತೋರಿಸಿ ನಂತರ ಜನರಿಗೆ ಮುಂದುವರಿಸಲು ಕರೆನೀಡುತ್ತಿದ್ದರು. ತಾವು ಮೊದಲು ನಡೆದುಕೊಳ್ಳದೇ ಬೇರೆಯವರಿಗೆ ಪ್ರವಚನ ನೀಡುವುದನ್ನು ಭ್ರಷ್ಟಾಚಾರವೆಂದೇ ಪರಿಗಣಿಸಬೇಕಾಗುತ್ತದೆ ಎಂದು ಹಿರಿಯ ರಂಗಕರ್ಮಿ, ಹೆಗ್ಗೋಡಿನ ದೇಸಿ ಟ್ರಸ್ಟ್‌ನ ಸಂಸ್ಥಾಪಕರಾದ ಪ್ರಸನ್ನ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯು ಮಂಗಳವಾರ ಅನ್‌ಲೈನ್ ವೇದಿಕೆಯಲ್ಲಿ ಅಯೋಜಿಸಿದ್ದ “ಭಾರತ ಸ್ವಾತಂತ್ರದ ಅಮೃತ ಮಹೋತ್ಸವ” ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಸ್ವಾತಂತ್ರ ಸಮಯದಲ್ಲಿ ನಡೆಸಿದ ಸ್ವದೇಶಿ ಚಳುವಳಿ, ಜಾತಿಪದ್ಧತಿ ನಾಶ, ಮಹಿಳಾ ಶೋಷಣೆ ವಿಮೋಚನೆ, ದೇವಸ್ಥಾನ ಪ್ರವೇಶಗಳಂತಹ ವಿಚಾರಗಳಲ್ಲಿ ಗಾಂಧೀಜಿ ತಮ್ಮ ನಡೆಯನ್ನು ಕೃತಿಗಿಳಿಸಿ ತೋರಿದರು. ಸಾರ್ವಜನಿಕ ಜೀವನದಲ್ಲಿ ನಾಯಕರು, ಗಣ್ಯರು ಪ್ರತಿಪಾದಿಸುವ ಆದರ್ಶಗಳನ್ನು ತಾವು ಮೊದಲು ಕೃತಿಗಿಳಿಸಿ ತೋರಬೇಕು. ರಾಮ ಪ್ರತಿಪಾದಿಸಿ ಸರಳ ಬದುಕು, ಅಶಕ್ತರಿಗೆ ನಿರ್ಮಿಸಿದ ಆಶ್ರಮ ವ್ಯವಸ್ಥೆ, ಸಭ್ಯತೆಯ ವಿಚಾರಗಳು ಇಂದಿನ ಸಮಾಜಕ್ಕೂ ಅನುಕರಣೀಯವಾಗಬೇಕು. ನಡೆದಂತೆ ನುಡಿಯದಿರುವುದು, ನಡೆಯದೇ ನುಡಿಯುವುದು ಎರಡೂ ಭ್ರಷ್ಷಾಚಾರವಾಗುತ್ತವೆ ಎಂದರು.
ಬ್ರಿಟಿಷರನ್ನು ವಾಪಸ್ಸು ಕಳಿಸುವ ಜೊತೆಗೆ ದೇಶದಲ್ಲಿನ ಅಸಮಾನತೆಯಂತಹ ಆಂತರಿಕ ಸಮಸ್ಯೆಗಳ ನಿವಾರಿಸಿ ಸಾಧಿಸಲೊರಟ ಸಮಸಮಾಜದ ಚಳುವಳಿಗಳ ನೈತಿಕ ಬೆಂಬಲವಿಲ್ಲದೇ ಕಾನೂನುಗಳನ್ನು ರೂಪಿಸಲಾಯಿತು. ಅವು ಬದಲಾವಣೆ ತರುವಲ್ಲಿ ಢಾಳಾಗಿ ಸೋತವು. ಸುಭದ್ರ ಸಮಾಜವಾದಿ ಮತ್ತು ಪರಿಪೂರ್ಣ ಸಂವಿಧಾನ ಹೊಂದಿದ ದೇಶ ನಮ್ಮದಾದರೂ, ಸಮಾಜದಲ್ಲಿ ಅನುಸರಣೆಯಿಲ್ಲದೇ ಪ್ರತಿಪಾದನೆಗಳು ನಡೆದದ್ದು ಇಂದು ಎಲ್ಲವನ್ನು ಅನುಮಾನದಿಂದ ನೋಡುವಂತಾಗಿದೆ. ಸರ್ಕಾರಗಳು ಚಳುವಳಿ ಮರೆತಿವೆ, ವಿವಿಗಳು ನೈಜ ಕಲಿಕೆಯ ಹೊಲಗದ್ದೆಗಳು, ಮಗ್ಗಗಳನ್ನು ಮರೆತಿವೆ. ದೇಶದ ತುಂಬಾ ವಿಚಾರಗಳಿವೆ ಆದರೆ ಅವುಗಳ ಸತ್ವ, ಅನುಸರಣೆ, ಪ್ರಾಮಾಣಿಕತೆಯ ಕುರಿತು ಅನುಮಾನಗಳಷ್ಟೆ ಮೂಡುತ್ತವೆ. ಪ್ರಜೆಗಳಿಂದ ಆರಂಭಿಸಿ, ನಾಯಕರವರೆಗೂ ಮೊದಲು ನಾವು ಮಾಡಿತೋರಿ ನಂತರ ಹೇಳುವ ಪರಿಪಾಠ ಬೆಳೆಯಬೇಕು. ನಾವು ಹೇಳಿದನ್ನು ಎದುರಿನವರಿಗೆ ಕೇವಲ ಕೇಳಿಸದೇ ಕಾಣಿಸಿ ತೋರಿಸಬೇಕು ಅದುವೇ ದೇಶ ಕಟ್ಟುವ ರೀತಿಯಾಗಬೇಕು ಎಂದು ಪ್ರತಿಪಾದಿಸಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾದ ಪ್ರೊ. ಬಿ. ತಿಮ್ಮೇಗೌಡ ಮಾತನಾಡಿ, ಯುವಜನರಲ್ಲಿ ಸ್ವಾತಂತ್ರ ಹೋರಾಟದ ಆದರ್ಶಗಳು, ಗುರಿ, ತ್ಯಾಗಬಲಿದಾನಗಳ ಕುರಿತು ಅರಿವಿನ ಕೊರತೆಯುಂಟಾಗಿದೆ. ಕರ್ನಾಟಕದ ಈಸೂರು ಸ್ವಾತಂತ್ರ ಸಂಗ್ರಾಮದಿಂದಿಡಿದು ದೇಶಾಂದ್ಯಂತ ಗಾಂಧಿ, ಅಂಬೇಡ್ಕರ್, ತಿಲಕ್‌ರು ಕೈಗೊಂಡ ಹೋರಾಟಗಳ ಕುರಿತು ರಾಜ್ಯದ ಎಲ್ಲ ಪದವಿ, ಸ್ನಾತಕೋತ್ತರ ಪದವಿ ಕಾಲೇಜು, ವಿವಿಗಳಲ್ಲಿ ಒಂದು ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಮಾತನಾಡಿ, ಸ್ವಾತಂತ್ರ ಹೋರಾಟದ ಜಾಗೃತಿ ಮೂಡಿಸಲು ಆಜಾದಿ ಕೀ ಅಮೃತ್ ಮಹೋತ್ಸವ್ ಅವಕಾಶ ನೀಡುತ್ತಿದೆ. ಕುವೆಂಪು ವಿವಿಯು ಇದರ ಭಾಗವಾಗಿ ಸ್ವಾತಂತ್ರೋತ್ಸವದ ಕುರಿತು ರಸಪ್ರಶ್ನೆ, ಚರ್ಚಾಸ್ಪರ್ಧೆ, ಪ್ರಬಂಧ ಲೇಖನ ಸೇರಿದಂತೆ ಇತ್ಯಾದಿ ಸರಣಿ ಕಾರ್ಯಕ್ರಮಗಳನ್ನು ಯೋಜಿಸಿದೆ ಎಂದರು.
ಈ ಸಂದರ್ಭದಲ್ಲಿ ಕುವೆಂಪು ವಿವಿಯ ಕುಲಸಚಿವರಾದ ಅನುರಾಧ ಜಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಎಂ. ತ್ಯಾಗರಾಜ, ಅಜಾದಿ ಕಾ ಅಮೃತ ಮಹೋತ್ಸವದ ರಾಜ್ಯ ನೋಡಲ್ ಅಧಿಕಾರಿ ಡಾ. ಕೆ. ಪ್ರಸನ್ನ ಕುಮಾರ್, ವಿವಿಯ ಪ್ರಾಧ್ಯಾಪಕ ಪ್ರೊ. ರಾಮೇಗೌಡ, ಡಾ. ವೀರೂಪಾಕ್ಷಪ್ಪ ಮಾತನಾಡಿದರು. ವಿವಿಯ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ, ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post