ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನಾಯಕರಾಗಿ ಗುರುತಿಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ #PM Narendra Modi ನೇತೃತ್ವದ ಕೇಂದ್ರ ಸರ್ಕಾರ ಅಭಿವೃಧ್ಧಿ ಪರ್ವದತ್ತ ದಾಪುಗಾಲು ಇಡುತ್ತಿದೆ. ಇಡೀ ಜಗತ್ತು ಭಾರತದ ಕಡೆಗೆ ತಿರುಗಿ ನೋಡುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಹರ್ಷ ವ್ಯಕ್ತಪಡಿಸಿದರು.
ಇಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮೂರನೇ ಬಾರಿಗೆ ಕೇಂದ್ರ ಸರ್ಕಾರ ಆಡಳಿತ ತಂದು 11 ವರ್ಷ ಪೂರೈಸಿದ್ದು, ದೇಶವು ಬಡತನದ ವಿರುದ್ಧ ಹೋರಾಟದಲ್ಲಿ ಗೆದ್ದು ಸರ್ಕಾರದ ಸರ್ವಾಂಗೀಣ ಸಾಧನೆಗಳ ಕಾರಣದಿಂದಾಗಿ ಭಾರತ ಇನ್ನು ಜಗತ್ತಿನ ನಾಲ್ಕನೇ ಅತೀ ದೊಡ್ಡ ಆರ್ಥಿಕತೆಯಾಗಿ ಬಲಿಷ್ಠವಾಗಿದೆ ಎಂದರು.

ದೇಶದಲ್ಲಿ ಸ್ವಚ್ಛತೆಯಲ್ಲಿ ಆದ್ಯತೆಯಾಗಿ ಇರಿಸಿಕೊಂಡು ಹಲವು ಯೋಜನೆಗಳನ್ನು ಹಾಕಿಕೊಂಡು ಸ್ವಚ್ಛತೆಯ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸಿದ ಪರಿಣಾಮ ದೇಶದಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣವಾಗಿದೆ. ಯೋಜನೆಯ ಫಲ ಎಂಬಂತೆ ದೇಶದ ಹಣಕಾಸು ವ್ಯವಹಾರದಲ್ಲಿ ಡಿಜಿಟಲ್ ಕ್ರಾಂತಿಯಾಗಿದೆ. ಏಕರೂಪ ತೆರಿಗೆ ವ್ಯವಸ್ಥೆಯನ್ನು ಮೋದಿಯವರು ಸವಾಲಾಗಿ ಸ್ವೀಕರಿಸಿ, ಆರಂಭದಲ್ಲಿ ಎಡರು-ತೊಡರುಗಳನ್ನು ನಿಭಾಯಿಸಿ ಇಂದು ಜಿಎಸ್‍ಟಿ ವ್ಯವಸ್ಥೆ ಬಹಳ ಸುಲಲಿತವಾಗಿ ನಡೆಯುವಂತೆ ಮಾಡಿ, 2018ರಲ್ಲಿ ಮಾಸಿಕ 60 ಸಾವಿರ ಕೋಟಿ ಇದ್ದ ಜಿಎಸ್‍ಟಿ ವರಮಾನ ಸಂಗ್ರಹ 2025ರ ಏಪ್ರಿಲ್‍ನಲ್ಲಿ ದಾಖಲೆಯ 2.37 ಲಕ್ಷ ಕೋಟಿ ಆಗಿದೆ ಎಂದರು.

ಶತ್ರುಗಳ ಎದುರು ಮೃದುಭಾವ ತೋರುವ, ಅನಿಶ್ಚಿಕತೆ ತೋರುವ ಯಾವುದೇ ದೇಶ ಇತರ ದೇಶಗಳ ಗೌರವ ಪಡೆಯದು. ಅದನ್ನು 10 ವರ್ಷಗಳ ಹಿಂದೆ ದೃಢವಾಗಿ ಎದುರಿಸಲಾಗಿದೆ. ಜನ್‍ಧನ್ ಯೋಜನೆಯ ಮೂಲಕ 55 ಕೋಟಿ ಜನಸಾಮಾನ್ಯರಿಗೆ ಬ್ಯಾಂಕ್ ಖಾತೆ, 10 ಕೋಟಿ ಮನೆಗಳಿಗೆ ಉಜ್ವಲ ಯೋಜನೆಯ ಮೂಲಕ ಅನಿಲ ಸಂಪರ್ಕ, ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ನೇರ ಹಣ ವರ್ಗಾವಣೆ, ಆಯುಷ್ಮಾನ್ ಯೋಜನೆಯಡಿ ಬಡವರಿಗೆ 1 ಲಕ್ಷದವರೆಗಿನ ಚಿಕಿತ್ಸಾ ವೆಚ್ಚಕ್ಕೆ ನೆರವು ಇವೆಲ್ಲಾ ನೇರವಾಗಿ ಜನಸಾಮಾನ್ಯರಿಗೆ ಆಗಿರುವ ಪ್ರಯೋಜನಗಳಾಗಿವೆ ಎಂದರು.
ಹೆದ್ದಾರಿ ನಿರ್ಮಾಣಕ್ಕೆ ವೇಗ, ಹೊಸದಾಗಿ ಸುಮಾರು 25 ಎಕ್ಸ್‍ಪ್ರೆಸ್ ಹೆದ್ದಾರಿಗಳ ನಿರ್ಮಾಣ ಕಾರ್ಯ ಆರಂಭ, ಸಣ್ಣ ನಗರಗಳಿಗೂ ವಿಮಾನ ಸೌಲಭ್ಯವಿರುಬೇಕು ಎಂಬ ಉದ್ದೇಶದ ಉಡಾನ್ ಯೋಜನೆಯಡಿ ನಿರ್ಮಿಸಿದ ಹಲವು ವಿಮಾನ ನಿಲ್ದಾಣಗಳು, ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಕಾಣಸಿಗುವ ರೈಲುಗಳಿಗೆ ಸರಿಸಮಾನವಾದ `ವಂದೇ ಭಾರತ್’ ರೈಲುಗಳು ಕೂಡ ಈ 11 ವರ್ಷಗಳ ಸಾಧನೆಗಳಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಉಪಮೇಯರ್ ಶಂಕರ್‍ಗನ್ನಿ ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರು ಮರಳಿ ಪಕ್ಷಕ್ಕೆ ಸೇರ್ಪಡೆಯಾದರು. ಅವರಿಗೆ ಶಾಲು ಹಾಕುವುದರ ಮೂಲಕ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರುಗಳಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಮಾಜಿ ಶಾಸಕರಾದ ಕೆ.ಜಿ. ಕುಮಾರಸ್ವಾಮಿ, ಅಶೋಕ್ ನಾಯಕ್, ಪ್ರಮುಖರಾದ ಎಸ್.ದತ್ತಾತ್ರಿ, ಸುರೇಖಾ ಮುರಳೀಧರ್, ಟಿ.ಡಿ.ಮೇಘರಾಜ್, ದೀನದಯಾಳ್, ಎಸ್. ಜ್ಞಾನೇಶ್ವರ್, ಸಿ.ಎಸ್. ಮಾಲತೇಶ್, ಹರಿಕೃಷ್ಣ, ಎಸ್.ರಮೇಶ್, ವಿನ್ಸೆಂಟ್ ರೋಡ್ರಿಗಸ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post