ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿಜ್ಞಾನ #Science ಶಿಕ್ಷಣವು ಕೇವಲ ಪುಸ್ತಕಗಳಲ್ಲಿ ಓದುವ ವಿಷಯವಲ್ಲ, ಅದು ಅನುಭವಿಸುವ ಮತ್ತು ಅನ್ವೇಷಿಸುವ ಪ್ರಕ್ರಿಯೆಯಾಗಿದೆ ಎಂದು ಸರ್ಕಾರಿ ಬಾಯ್ಸ್ ಜೂನಿಯರ್ ಕಾಲೇಜ್ ನಿವೃತ್ತ ಉಪ ಪ್ರಾಂಶುಪಾಲ ಟಿ.ಎಂ. ಪಾರ್ಥಸಾರಥಿ ತಿಳಿಸಿದರು.
ಇಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ #Kumadvathi Education Institution ಹಾಗೂ ಕುಮದ್ವತಿ ಕೇಂದ್ರೀಯ ವಸತಿ ಶಾಲೆ ಹಾಗೂ ಮೈತ್ರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ, NCERT ಪಠ್ಯಕ್ರಮವನ್ನು ಆಧರಿಸಿದ ಒಂದು ದಿನದ ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆ ಕಾರ್ಯಾಗಾರ ಯಶಸ್ವಿಯಾಗಿ ಕುಮದ್ವತಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು.
ವಿಜ್ಞಾನವನ್ನು ಪರಿಣಾಮಕಾರಿಯಾಗಿ ಕಲಿಯಲು ಪ್ರಯೋಗಗಳು ಅತ್ಯಂತ ಮುಖ್ಯವಾದ ಪಾತ್ರವಹಿಸುತ್ತವೆ ಹಾಗೂ ನೇರವಾಗಿ ಗಮನಿಸಿ ವಿಜ್ಞಾನದ ತತ್ವಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರವಿ ಕೆ.ಎಸ್. ಅಧ್ಯಕ್ಷರು ಹಿರಿಯ ವಿದ್ಯಾರ್ಥಿಗಳ ಸಂಘ ಕುಮದ್ವತಿ ಶಿಕ್ಷಣ ಮಹಾ ವಿದ್ಯಾಲಯ ಶಿಕಾರಿಪುರ ಹಾಗೂ ಸಹ ಶಿಕ್ಷಕರು ಎಸ್ ಎಸ್ ಕಂಪೋಸಿಟ್ ಪಿಯು ಕಾಲೇಜ್ ಸುಣಕಲ್ ಬಿದರಿ ರಾಣೆಬೆನ್ನೂರು ಅವರು ಮಾತನಾಡಿ, ವಿಜ್ಞಾನ ಶಿಕ್ಷಕರು ಪಾಠ ಬೋಧಿಸುವಾಗ ಕೇವಲ ಸಿದ್ಧಾಂತವನ್ನು ಹೇಳುವುದಷ್ಟೇ ಸಾಲದು; ಸಾಧ್ಯವಾದಷ್ಟು ಪ್ರಾಯೋಗಿಕವಾಗಿ ತೋರಿಸುವುದು ಅಗತ್ಯ ಹಾಗೂ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳ ಕಲ್ಪನಾಶಕ್ತಿ ವಿಸ್ತರಿಸಿ, ವಿಷಯದ ಬಗ್ಗೆ ಸ್ಪಷ್ಟವಾದ ಅರಿವು ಮೂಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿ ಪ್ರತಿನಿಧಿಗಳಾದ ಡಾ. ಶಿವಕುಮಾರ್ ಜಿ.ಎಸ್. ಅವರು ಮಾತನಾಡಿ, ಇಂದಿನ ಜಗತ್ತಿನಲ್ಲಿ ಅನೇಕ ಹೊಸ ಆವಿಷ್ಕಾರಗಳು ನಿರಂತರವಾಗಿ ನಡೆಯುತ್ತಿವೆ. ವಿಜ್ಞಾನವೆಂದರೆ ಕೇವಲ ಪ್ರಯೋಗಾಲಯಕ್ಕೆ ಸೀಮಿತವಾದ ವಿಷಯವಲ್ಲ; ಅದು ನಮ್ಮ ಸುತ್ತಮುತ್ತಲಿನ ಪ್ರಪಂಚದ ಪ್ರತಿಯೊಂದು ಘಟನೆಯಲ್ಲಿ ಅಡಗಿದೆ ಎಂದರು. ಆದ್ದರಿಂದ ವಿದ್ಯಾರ್ಥಿಗಳು ವಿಜ್ಞಾನವನ್ನು ಕೇವಲ ಓದುವ ವಿಷಯವಾಗಿ ನೋಡುವುದನ್ನು ಬಿಟ್ಟು, ಅದನ್ನು ಜೀವನದ ಭಾಗವಾಗಿ ಅರ್ಥಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಜ್ಞಾನ ಶಿಕ್ಷಣದಲ್ಲಿ ಪ್ರಯೋಗಗಳಿಗೆ ಪ್ರಮುಖ ಸ್ಥಾನ ನೀಡುವುದರಿಂದ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಂಶೋಧನಾ ಮನೋಭಾವ, ತಾರ್ಕಿಕ ಚಿಂತನೆ ಹಾಗೂ ಸಮಸ್ಯೆ ಪರಿಹರಿಸುವ ಕೌಶಲಗಳು ಬೆಳೆಯುತ್ತವೆ. ಪ್ರಶ್ನೆ ಮಾಡುವ ಮನೋಭಾವ ಮತ್ತು ಸ್ವತಃ ಪ್ರಯೋಗಗಳನ್ನು ಮಾಡುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಅವರ ಭವಿಷ್ಯವನ್ನು ಬಲಪಡಿಸಲು ಸಹ ಸಹಕಾರಿಯಾಗುತ್ತದೆ.
ಇಂತಹ ಕಾರ್ಯಾಗಾರಗಳು ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ತುಂಬಾ ಉಪಯುಕ್ತವಾಗಿವೆ. ವಿಶೇಷವಾಗಿ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಆಧರಿಸಿದ ಪ್ರಯೋಗಗಳನ್ನು ನೇರವಾಗಿ ನೋಡಿ ತಿಳಿದುಕೊಳ್ಳುವ ಅವಕಾಶ ದೊರಕುವುದು, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದರ ಮೂಲಕ ತರಗತಿ ಬೋಧನೆ ಇನ್ನಷ್ಟು ಪರಿಣಾಮಕಾರಿಯಾಗಬಹುದು.
ಮೈತ್ರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಕುಮದ್ವತಿ ರೆಸಿಡೆನ್ಸಿಯಲ್ ಸೆಂಟ್ರಲ್ ಸ್ಕೂಲ್, ಶಿಕಾರಿಪುರದ 9ನೇ ತರಗತಿ ವಿದ್ಯಾರ್ಥಿಗಳು ಮತ್ತು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಹಾಗು ಮೈತ್ರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಬೋಧಕ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಜ್ಞಾನ ವಿಭಾಗದ ಪ್ರಶಿಕ್ಷಕರಾದ ಡಾ. ಯದುಕುಮಾರ ಎಂ, ಡಾ.ನಾಗೇಂದ್ರಪ್ಪ, ಇವರು ಕಾರ್ಯಕ್ರಮವನ್ನು ಉತ್ತಮವಾಗಿ ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮವನ್ನು ಕಾವ್ಯ ಸುಣಗಾರ್ ತಂಡದವರು ಪ್ರಾರ್ಥಿಸಿ, ಎಂ ಜಿ ಚಂದನ್ ಸಹ ಶಿಕ್ಷಕರು ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















