ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಿಸುವುದು ನಿಲ್ಲಿಸಿದ ಪುರಸಭೆ ನಿರ್ಧಾರದ ವಿರುದ್ಧ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿ, ಕೂಡಲೇ ಸೂಕ್ತ ಜಾಗದಲ್ಲಿ ಪ್ರತಿಮೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಹುಲ್ಮಾರ್ ಮಹೇಶ್ ವಿಷಯ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಕೇಳಿದಾಗ, ಸದಸ್ಯರಾದ ಪ್ರಕಾಶ್, ಉಳ್ಳಿ ದರ್ಶನ್, ನಾಗರಾಜಗೌಡ ಸೇರಿ ಹಲವರು ಅಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು.
ನಂತರ ರಾಯಣ್ಣ, ಅಂಬೇಡ್ಕರ್, ಬಸವೇಶ್ವರ ಹಾಗೂ ಅಕ್ಕಮಹಾದೇವಿ ಪ್ರತಿಮೆ ನಿರ್ಮಾಣಕ್ಕೆ ಸ್ಥಳಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಮನವಿ ಕಳುಹಿಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಒಳಚರಂಡಿ ಕಾಮಗಾರಿ ಕುರಿತು ಮಾಹಿತಿ ನೀಡುವಂತೆ ಸದಸ್ಯ ನಾಗರಾಜಗೌಡ ಕೇಳಿದರು. ನಾಮನಿರ್ದೇಶಿತ ಸದಸ್ಯ ಗುರುರಾಜ್ ಜಗತಾಪ್ ಮಾತನಾಡಿ, ಕಳೆದ ಸಭೆಯಲ್ಲಿ ವಿಷಯ ಕುರಿತು ಡೀಸೆಂಟ್ ನೋಟ್ ನೀಡಿದ ನಂತರ ಪುನಃ ಮಾಹಿತಿ ತಿಳಿಸುವ ಅಗತ್ಯವಿಲ್ಲ ಎಂದರು.
ವಿರೋಧ ಪಕ್ಷದ ಸದಸ್ಯರನ್ನು ಹೊರಗಿಟ್ಟು ಸಭೆ ನಡೆಸಿರಿ, ಎಲ್ಲೋ ಸಿದ್ಧವಾಗುವ ಅಜೆಂಡಾ ತಂದು ಸಭೆಯಲ್ಲಿ ಮಂಡಿಸುವ ಬಿಜೆಪಿ ಸದಸ್ಯರು ಜನತೆ ಹಿತ ಬಲಿಕೊಡುತ್ತಿದ್ದಾರೆ ಎಂದು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಮುಖ್ಯಾಧಿಕಾರಿ ಸುರೇಶ್ ಮಾತನಾಡಿ, ಪಟ್ಟಣದಲ್ಲಿ 93ಕಿಮೀ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. 53ಕಿಮೀ ಪ್ಲೋ ಟೆಸ್ಟ್ ಪೂರ್ಣಗೊಂಡಿದೆ. 5 ಸಾವಿರ ರಿಸಿವಿಂಗ್ ಚೇಂಬರ್‌ಗಳಲ್ಲಿ 3550 ಗುರುತಿಸಿದ್ದು, ಉಳಿದವು ಮುಚ್ಚಿಹೋಗಿದ್ದು ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಸರಕಾರ ಪ್ರತಿಮನೆಗೆ ಮಳೆಕೊಯ್ಲು ಘಟಕ ಕಡ್ಡಾಯಗೊಳಿಸಿದೆ ಎನ್ನುವ ಕುರಿತು ಗಮನ ಸೆಳೆದರು.
ಖಾಸಗಿ ಶಾಲೆ ಕಟ್ಟಡ ಕೆರೆ ಒತ್ತುವರಿ ಜಾಗದಲ್ಲಿದೆ ಎನ್ನುವ ಆರೋಪ ನ್ಯಾಯಾಲಯದಲ್ಲಿದೆ. ಭದ್ರಾಪುರ ಸಮೀಪ 27 ಮನೆಗಳು ಒತ್ತುವರಿ ಆಗಿದ್ದು ಪುನರ್‌ವಸತಿಗೆ ಸರಕಾರ ಮುಂದಾಗುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಮಾರಿಕಾಂಬ ದೇವಸ್ಥಾನ ಸಮೀಪ ಫುಡ್‌ಕೋರ್ಟ್ ನಿರ್ಮಿಸಿದಲ್ಲಿ ಭಕ್ತಾದಿಗಳಿಗೆ ತೊಂದರೆ ಆಗುತ್ತದೆ ಎಂದು ಸದಸ್ಯ ರಮೇಶ್ ಆಕ್ಷೇಪಿಸಿದರು. ಸದಸ್ಯ ಉಳ್ಳಿ ದರ್ಶನ್ ಮಾತನಾಡಿ, ಅಂಬೇಡ್ಕರ್ ನಗರದ ೫ಲಕ್ಷ ರೂ. ವೆಚ್ಚದ ಗ್ರಂಥಾಲಯ ಓದುಗರಿಲ್ಲದೆ ಅನುಪಯುಕ್ತವಾಗಿದೆ. ಇದರ ಸದ್ಭಳಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ಮಶಾನ, ಕಾಲೇಜು ಬಳಿ ಹೈಮಾಸ್ಕ್ ದೀಪ ಅಳವಡಿಸುವಂತೆ ಮನವಿ ಮಾಡಿದರು.
ಪುರಸಭೆ ಅಧ್ಯಕ್ಷ ಲಕ್ಷ್ಮೀ ಮಹಲಿಂಗಪ್ಪ ಸಭೆ ಅಧ್ಯಕ್ಷತೆ ವಹಿಸಿದ್ದರು, ಸ್ಥಾಯಿ ಸಮಿತಿ ಅಧ್ಯಕ್ಷ ರೇಣುಕಸ್ವಾಮಿ, ಪಾಲಾಕ್ಷಪ್ಪ, ರೂಪಕಲಾಹೆಗಡೆ, ಟಿ.ಎಸ್.ಮೋಹನ್, ಸುನಂದ, ಉಮಾವತಿ, ರೋಷನ್ ಸೇರಿ ಎಲ್ಲ ಸದಸ್ಯರು, ಅಧಿಕಾರಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post