ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕಾರಿಪುರದಲ್ಲಿ 2026ರ ಫೆಬ್ರುವರಿ 21 ರಂದು ನೂರಾರು ಕಂಪೆನಿಗಳು ಪಾಲ್ಗೊಳ್ಳುವ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದ್ದು, ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಬಿ.ವೈ. ವಿಜಯೇಂದ್ರ #BYVijayendra ಕರೆ ನೀಡಿದರು.
ಕುಮದ್ವತಿ ಸಾಂಸ್ಕೃತಿಕ ಉತ್ಸವದ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕಾರಿಪುರದಲ್ಲಿ ಫೆ. 21 ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತದೆ. ನೂರಾರು ಕಂಪನಿಗಳನ್ನು ಈ ಸಂಸ್ಥೆಯ ಅಡಿಯಲ್ಲಿ ತಂದು ಈ ಭಾಗದ ವಿದ್ಯಾವಂತ ಯುವ ಜನತೆಗೆ ಉದ್ಯೋಗವನ್ನು ಕಲ್ಪಿಸುವ ಜವಾಬ್ದಾರಿ ಈ ಸಂಸ್ಥೆಗೆ ಹಾಗೂ ಶಾಸಕರಾದ ನನಗಿದೆ. ಈ ನಿಟ್ಟಿನಲ್ಲಿ ಮೂಡುಬಿದರೆಯ ಆಳ್ವಾಸ್ ಸಹಯೋಗದೊಂದಿಗೆ ಬೃಹತ್ ಉದ್ಯೋಗ ಮೇಳವನ್ನು ನಮ್ಮ ತಂದೆಯವರಾದ ಬಿ.ಎಸ್. ಯಡಿಯೂರಪ್ಪನವರ ಜನ್ಮ ದಿನಾಚರಣೆಯ ಪ್ರಯುಕ್ತ ನಾನು ಹಾಗೂ ಸಂಸದರಾದ ಬಿ.ವೈ. ರಾಘವೇಂದ್ರ ಜೊತೆಗೂಡಿ ಈ ಕಾರ್ಯಕ್ರಮವನ್ನು ಮಾಡುತ್ತಿದ್ದು ಇದರ ಸದುಪಯೋಗವನ್ನು ಯುವಜನತೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಇನ್ನು, ಗುಣಮಟ್ಟದ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಶಿಕ್ಷಣವೆಂದರೆ ಕೇವಲ ಪಾಠ ಪರೀಕ್ಷೆಗಳಿಗೆ ಸೀಮಿತವಾಗದೆ ಕ್ರೀಡಾ ಚಟುವಟಿಕೆಗಳು ಸಾಂಸ್ಕೃತಿಕ ಚಟುವಟಿಕೆಗಳು ಈ ರೀತಿಯ ಪಠ್ಯೇತರ ಚಟುವಟಿಕೆಗಳ ಮುಖಾಂತರ ಪ್ರತಿಯೊಂದು ಮಗು ಸಂಪೂರ್ಣವಾದ ಶಿಕ್ಷಣವನ್ನು ಪಡೆದಂತಾಗುತ್ತದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿಗಳು ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರ ಕನಸುಗಳು ದೊಡ್ಡದಿದ್ದು, ಆ ಕನಸುಗಳಿಗೆ ಮಕ್ಕಳ ಮನಸ್ಥಿತಿಯನ್ನು ಅರಿತು ಅವರಿಗೆ ಆಸಕ್ತಿದಾಯಕ ಕ್ಷೇತ್ರವನ್ನು ಆಯ್ಕೆ ಮಾಡುವ ಸ್ವಾತಂತ್ರ ಕೊಡಬೇಕು. ಕೇವಲ ಡಾಕ್ಟರ್, ಇಂಜಿನಿಯರ್ ಇತ್ಯಾದಿ ಕೋರ್ಸ್’ಗಳಿಗೆ ಒತ್ತಡ ಜಾಸ್ತಿ ಇದೆ. ಇದರ ಆಚೆಗೆ ಕ್ರೀಡಾ ಸಾಂಸ್ಕೃತಿಕ ಜಗತ್ತು ದೊಡ್ಡದಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಇಂದು ಅನೇಕ ಯುವಕರು ದೊಡ್ಡ ಸಾಧನೆ ಮಾಡಿರುವುದನ್ನುಯ ನೋಡಬಹುದು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಅತ್ಯಂತ ಕಡಿಮೆ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಈ ಎಲ್ಲವನ್ನು ಒಂದು ಸಂಸ್ಥೆಯ ಅಡಿ ಕೊಡುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಸದುಪಯೋಗವನ್ನು ಪೋಷಕರು ಹಾಗೂ ವಿದ್ಯಾರ್ಥಿಗಳು ಪಡೆಯಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ಪ್ರಾಮಾಣಿಕತೆ ಇದ್ದಲ್ಲಿ ಯಶಸ್ಸಿನ ಮೆಟ್ಟಿಲನ್ನು ಹತ್ತಲು ಸಾಧ್ಯವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಓದದೇ ವರ್ಷವಿಡಿ ಸಮಯವನ್ನು ಕೊಟ್ಟಲ್ಲಿ ಈ ರೀತಿಯ ಎಲ್ಲಾ ಉತ್ಸವಗಳನ್ನು ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ. ಶಿವಕುಮಾರ್, ನಿರ್ದೇಶಕರಾದ ತೇಜಸ್ವಿನಿ ರಾಘವೇಂದ್ರ, ಕಿಯಾ ಶೋ ರೂಮಿನ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಆರ್. ಸುಭಾಷ್, ಪ್ರಾಚಾರ್ಯರಾದ ಡಾ. ಶಿವಕುಮಾರ್, ಕೆ. ಕುಬೇರಪ್ಪ, ಡಾ. ಎಂ. ವೀರೇಂದ್ರ, ವಿದ್ಯಾ ಶಂಕರ್, ವಿಶ್ವನಾಥ್, ಪ್ರಶಾಂತ್ ಹಾಗೂ ಪ್ರಶಾಂತ್ ಕುಬಸದ್ ಉಪಸ್ಥಿತರಿದ್ದರು.
ಡಾ. ವೀರೇಂದ್ರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶ್ವನಾಥ್ ವರದಿ ವಾಚನ, ಪರ್ವಿಜ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು.
ಈ ಸಮಾರೋಪ ಕಾರ್ಯಕ್ರಮದಲ್ಲಿ ಕುಮದ್ವತಿ ಪಿಯು ಕಾಲೇಜಿನ ಹಾಗೂ ಮೈತ್ರಿ ಶಾಲೆ, ಕುಮದ್ದತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಮನೋಮೋಹಕ ನೃತ್ಯ ಪ್ರದರ್ಶನ ಮಾಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















