ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸಮಾಜದಲ್ಲಿನ ಅನೀತಿ, ಅಧರ್ಮವನ್ನು ಮೆಟ್ಟಿ ಧರ್ಮ ಸ್ಥಾಪನೆಗೆ ಶ್ರೀಕೃಷ್ಣ ಪರಮಾತ್ಮ ಜನ್ಮ ತಾಳಿದಂತೆ, ಪ್ರಸ್ತುತ ಸಮಾಜದಲ್ಲಿ ಭ್ರಷ್ಟಾಚಾರ ದಂತಹ ಅಧರ್ಮವನ್ನು ಮೆಟ್ಟಿ ನಿಂತು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರಿಗೂ ಶ್ರೀಕೃಷ್ಣ ಸ್ಫೂರ್ತಿಯ ಚಿಲುಮೆಯಾಗಲಿ ಎಂದು ಶುಭಾ ರಘು ತಿಳಿಸಿದರು.
ನಗರದ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ #Shri Krishna Janmashtami ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನೈತಿಕತೆ, ಸಾಮಾಜಿಕ ಕಾಳಜಿ, ಸರ್ವರ ಏಳಿಗೆಯ ಚಿಂತನೆಯೇ ಧರ್ಮ ಕಾರ್ಯ. ಅನಾಚಾರವನ್ನು ಶ್ರೀಕೃಷ್ಣನಂತೆ ಮರ್ದನ ಮಾಡಿ ಸದಾಚಾರ, ಸನ್ನಡತೆ ಯಿಂದ ಜಿಲ್ಲೆಯ ಅಭಿವೃದ್ಧಿ ರಥ ಮುನ್ನಡೆಸಲು ನಾವೆಲ್ಲ ಮುಂದಾಗ ಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮತ್ತೊರ್ವ ಅತಿಥಿ ಅಪರ್ಣಾ ಗುರುಮೂರ್ತಿ ಮಾತನಾಡಿ, ಭಗವಂತನ ಅವತಾರವೆಂದೇ ಭಾವಿಸಲಾದ ಶ್ರೀಕೃಷ್ಣ ಮಾನವ ಕುಲಕ್ಕೆ ಪಶು, ಪರಿಸರಕ್ಕೆ ಒಳಿತನ್ನು ಬಯಸಿದ ವನು. ಅನೀತಿ, ಅಧರ್ಮವನ್ನು ಮೆಟ್ಟಿ ಧರ್ಮವನ್ನು ಮರು ಸ್ಥಾಪಿಸಿದ. ಆಧುನಿಕ ಕಾಲದಲ್ಲೂ ಅವನ ತತ್ವಾದರ್ಶಗಳು ಮಾದರಿಯಾಗಿವೆ ಎಂದು ಶ್ರೀ ಕೃಷ್ಣನ ಕೊನೆದಿನದ ಜೀವನವನ್ನು ಕಥೆಯ ಮೂಲಕ ಅರ್ಥಗರ್ಭಿತವಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವನಾಥ ಮಾತನಾಡಿ, ಧರ್ಮದ ಪುನರ್ ಸ್ಥಾಪನೆಗಾಗಿ ಅರ್ಜುನನ ರಥಕ್ಕೆ ಶ್ರೀಕೃಷ್ಣ ಸಾರಥ್ಯ ವಹಿಸಿದಂತೆ ಸಮಾಜದ ಏಳಿಗೆಯ ಅಭಿವೃದ್ಧಿ ರಥವನ್ನು ಎಳೆಯಲು ನಮ್ಮೊಂದಿಗೆ ಸಮಾಜದ ಜನರು ಮುಂದಾಗಬೇಕು ಎಂದು ತಿಳಿಸಿದರು.
ಸ್ನೇಹಾ ಸುಮಂತ್ ಮಗು ಕು. ಸಾದ್ವಿಕ್ ನನ್ನು ಶ್ರೀ ಕೃಷ್ಣನ ವೇಷದಲ್ಲಿ ತೊಟ್ಟಿಲಿಗೆ ಹಾಕುವುದರ ಮೂಲಕ ಮೈತ್ರಿ ಮಾತೃಮಂಡಲದ ಮಾತೆಯರು ತೊಟ್ಟಿಲು ಕಾರ್ಯಕ್ರಮವನ್ನು ನೆರೆವೇರಿಸಿದರು.
ಕಾರ್ಯಕ್ರಮದಲ್ಲಿ ಅರುಣ ಮತ್ತು ಉದಯ ವರ್ಗದ ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಕಂಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಪ್ರಾಚಾರ್ಯ ಸಿದ್ದೇಶ್ವರ, ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಪ್ರಶಾಂತ ಕುಬಸದ, ಮಾತೃ ಮಂಡಳಿಯ ಮಾತೆಯರು, ಶಾಲಾ ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಚಂದ್ರಕಲಾ ಸ್ವಾಗತಿಸಿ, ನಾಗಮ್ಮ ವಂದಿಸಿ, ಕು ರಂಜಿತಾ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post