ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪಟ್ಟಣದ ಹಿರಿಯ ಸಮಾಜ ಸೇವಕ ಕೃಷ್ಣರಾಜ ಭಟ್ (80) ಕೇರಳದ ಕೊಲ್ಲಂನಲ್ಲಿ ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ ಕಸ್ತೂರಿ ಮತ್ತು ಐವರು ಪುತ್ರಿಯರು ಇದ್ದಾರೆ.
ಕೆಲದಿನಗಳಿಂದ ವಯೋಸಹಜ ಸಮಸ್ಯೆಗಳಿಂದ ಬಳಲಿದ್ದ ಅವರು, ತಮ್ಮ ಹಿರಿಯ ಪುತ್ರಿ ಡಾ. ಹೇಮಾವತಿ ಅವರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.
ಉಡುಪಿ ಸಮೀಪ ಶಿವಪುರದಿಂದ ಬಂದು ಶಿಕಾರಿಪುರದಲ್ಲಿ ನೆಲೆ ಕಂಡುಕೊಂಡಿದ್ದ ಕೃಷ್ಣರಾಜ ಭಟ್, 5 ದಶಕದ ಹಿಂದೆ ತಾಲೂಕು ಕೇಂದ್ರದಲ್ಲೂ ಹೋಟೆಲ್ ಉದ್ಯಮ ಆರಂಭಿಸಿ ಹಲವರಿಗೆ ಮಾದರಿಯಾಗಿದ್ದರು.
Also read: ಹಳ್ಳಕ್ಕೆ ಬಿದ್ದ ಬೈಕ್, ಸವಾರ ಸ್ಥಳದಲ್ಲಿಯೇ ಸಾವು
ವೃತ್ತಿಯೊಂದಿಗೆ ಸಮಾಜಸೇವೆ ಅವರ ಪ್ರವೃತ್ತಿಯಾಗಿತ್ತು. ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ವೈದ್ಯಕೀಯ ಚಿಕಿತ್ಸೆಗೆ ಆಗಮಿಸುತ್ತಿದ್ದ ಹಲವರಿಗೆ ಅವರು ಉಚಿತವಾಗಿ ಅನ್ನಾಹಾರಗಳನ್ನು ದಾನ ಮಾಡುವುದರಲ್ಲಿ ಅಗ್ರಗಣ್ಯರಾಗಿದ್ದರು. ಸಮಾಜಸೇವೆಯಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕೃಷ್ಣರಾಜ ಭಟ್, ಬಡ ಕುಟುಂಬದ ಮತ್ತು ಅನಾಥ ಶವಗಳ ಸಂಸ್ಕಾರ ಮಾಡುವಲ್ಲಿ ಅನನ್ಯ ಸೇವೆ ಸಲ್ಲಿಸಿದ್ದರು. ಹಲವು ಬಡ ವಿದ್ಯಾರ್ಥಿಗಳ ಶಾಲಾ ಶಿಕ್ಷಣಕ್ಕೂ ಬೇಕಾದ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದರು. ತಮ್ಮ ಸೇವೆಗೆ ಯಾವುದೇ ಪ್ರಚಾರ ಬಯಸದ ಕೃಷ್ಣರಾಜ ಭಟ್, ಸಮಾಜದ ಋಣ ತೀರಿಸಲು ನಾವು ನಮ್ಮ ನಮ್ಮ ವ್ಯಾಪ್ತಿಯಲ್ಲೇ ಏನಾದರೂ ಸೇವೆ ಮಾಡುತ್ತಿರಬೇಕು ಎಂಬ ಧ್ಯೇಯ ಹೊಂದಿದ್ದರು.
ಕೃಷ್ಣರಾಜ ಭಟ್ ನಿಧನದಿಂದ ಶಿಕಾರಿಪುರದ ಹೋಟೆಲ್ ಉದ್ಯಮ ಮತ್ತು ಸೇವಾ ವಲಯದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post