ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಾರ್ಷಿಕ ಕ್ರೀಡಾಕೂಟಗಳು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ, ಶಿಸ್ತು, ತಂಡದ ಮನೋಭಾವ ಮತ್ತು ಸರ್ವತೋಮುಖ ಬೆಳವಣಿಗೆಯನ್ನು ಉತ್ತೇಜಿಸುತ್ತವೆಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಡಾ ಶಿವಕುಮಾರ್ ಜಿಎಸ್ ಹೇಳಿದರು.
ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಲು ಸಹಾಯವಾಗುತ್ತದೆ ಎಂದರು.
ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳು ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ದೇಹವನ್ನು ಸದೃಢಗೊಳಿಸುವುದಲ್ಲದೆ, ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತವೆ. ಸೋಲು ಗೆಲುವನ್ನು ಸಮಾನವಾಗಿ ಒಪ್ಪಿಕೊಳ್ಳುವ ಮನೋಭಾವವನ್ನೂ ಬೆಳೆಸುತ್ತವೆ. ತಂಡ ಸ್ಫೂರ್ತಿ, ಸಹಕಾರ ಮತ್ತು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ. ದೇಶಕ್ಕೆ ಇಂದು ಆರೋಗ್ಯವಂತ ಯುವಶಕ್ತಿಯ ಅವಶ್ಯಕತೆ ಇದ್ದು, ವಿದ್ಯಾರ್ಥಿಗಳು ಸದಾ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ ರವೀಂದ್ರ ಕೆಸಿ ಮಾತನಾಡಿ “ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ಹಾಗೂ ಕ್ರೀಡಾಮನೋಭಾವವನ್ನು ಬೆಳೆಸುವುದು ಇಂದಿನ ಶಿಕ್ಷಣದ ಪ್ರಮುಖ ಅಂಶವಾಗಿದೆ. ಕ್ರೀಡೆಗಳು ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ಅದು ದೇಹವನ್ನು ಸದೃಢಗೊಳಿಸುವುದಲ್ಲದೆ, ಮನಸ್ಸನ್ನು ಸಹ ಶಾಂತವಾಗಿಡಲು ಸಹಾಯ ಮಾಡುತ್ತವೆ” ಎಂದು ಹೇಳಿದರು.
ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ರಾಜು ಹಿರಿಯಣ್ಣ, ಮಂಜುಳಾ ಪಾಟೀಲ್ ಹಾಗೂ ಸಂಸ್ಥೆಯ ಎಲ್ಲಾ ಅಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















