ಶಿಕಾರಿಪುರ: ಸದೃಢ ಸಮಾಜ ನಿರ್ಮಾಣದಲ್ಲಿ ಬಹು ಮಹತ್ವದ ಪಾತ್ರವನ್ನು ವಹಿಸುತ್ತಿರುವ ಕ್ರೀಡೆಯ ಮೂಲಕ ಪ್ರತಿಯೊಬ್ಬರಲ್ಲಿ ಒಗ್ಗಟ್ಟು, ಹೋರಾಟ, ದೇಶಾಭಿಮಾನ ರೂಪಿಸಲು ಬಿಜೆಪಿ ಏಕಕಾಲದಲ್ಲಿ ಕ್ರೀಡೆಯನ್ನು ಎಲ್ಲೆಡೆ ಆಯೋಜಿಸುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ದಿ.ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆದ ಹೊನಲು ಬೆಳಕಿನ ಕಮಲ ಕಪ್ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಚಿಂತನೆಗಳಿಂದ ಕ್ರೀಡಾ ಮನೋಭಾವದಿಂದ ಮಾತ್ರ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ತಪ್ಪಿದಲ್ಲಿ ಯುವಪೀಳಿಗೆಯಲ್ಲಿ ಸ್ಪರ್ಧಾತ್ಮಕ ಚಿಂತನೆ ಹೋರಾಟದ ಮನೋಭಾವದ ಕೊರತೆಯಿಂದ ಹಿಂದುಳಿಯುವ ಸಾದ್ಯತೆ ಹೆಚ್ಚಾಗಲಿದೆ ಎಂದು ತಿಳಿಸಿದರು.
ಸದೃಢ ಸಮಾಜ ನಿರ್ಮಾಣದಲ್ಲಿ ಕ್ರೀಡಾ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು ಈ ದಿಸೆಯಲ್ಲಿ ಭಾರತೀಯ ಜನತಾ ಪಕ್ಷ ರಾಜಕೀಯ ಪಕ್ಷವಾಗಿ ಮಾತ್ರ ಕಾರ್ಯ ನಿರ್ವಹಿಸದೆ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣದ ಗುರಿಯನ್ನು ಹೊಂದಿದೆ ಎಂದರು.
ಭಾರತೀಯ ಜನತಾ ಪಕ್ಷ ಅತ್ಯಂತ ವಿಶಿಷ್ಟ ರಾಜಕೀಯ ಪಕ್ಷವಾಗಿದ್ದು ದೇಶದ ಸಮಗ್ರ ಅಭಿವೃದ್ದಿಯನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಪಕ್ಷ ಈ ದಿಸೆಯಲ್ಲಿ ಯುವಪೀಳಿಗೆಯಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿ ಬಲಿಷ್ಠ ರಾಷ್ಟ್ರವಾಗಿಸುವ ಸಂಕಲ್ಪವನ್ನು ಹೊಂದಿದೆ ಎಂದ ಅವರು ಬಿಜೆಪಿ ರಾಜಕೀಯ ಪಕ್ಷವಾಗಿ ಮಾತ್ರ ಗುರುತಿಸಿಕೊಳ್ಳದೆ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳ ಮೂಲಕ ಭಾರತದ ಪರಂಪರೆ ಇತಿಹಾಸದ ಶ್ರೇಷ್ಠತೆಯನ್ನು ಪರಿಚಯಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಕ್ರೀಡೆಗಳು ನೇಪಥ್ಯಕ್ಕೆ ಸರಿಯುತ್ತಿದ್ದು ಸಂಸ್ಕೃತಿ, ಪೂರ್ವಜರ ಬಳುವಳಿಯಾದ ಹಲವು ಕ್ರೀಡೆಗಳ ಬಗ್ಗೆ ಯುವಪೀಳಿಗೆಯಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ ಹಲವು ಗ್ರಾಮೀಣ ಯುವಕರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಹಿರಿಮೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಅಪ್ಪಟ ಗ್ರಾಮೀಣ ಪ್ರತಿಭೆಯನ್ನು ಪ್ರೋತ್ಸಾಹಿಸಿ ಹೊಸ ಪ್ರತಿಭೆಗಳಿಗೆ ವೇದಿಕೆಯನ್ನು ದೊರಕಿಸಬೇಕಾಗಿದೆ. ದೇಶಕ್ಕೆ ಮೋದಿ ನಾಯಕತ್ವದ ಅಗತ್ಯತೆ ಹೆಚ್ಚಾಗಿದ್ದು ಪುನಃ ಮೋದಿ ನೇತೃತ್ವದಲ್ಲಿ ಭಾರತ ಪ್ರಪಂಚದಲ್ಲಿ ಅಭಿವೃದ್ದಿ, ನಾಯಕತ್ವದ ಮೂಲಕ ಗುರುತಿಸಿಕೊಳ್ಳಬೇಕಾಗಿದೆ ಈ ದಿಸೆಯಲ್ಲಿ ಪ್ರತಿಯೊಬ್ಬರೂ ಮೋದಿ ನಾಯಕತ್ವದ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಪಂದ್ಯಾವಳಿಯಲ್ಲಿ 18 ತಂಡಗಳು ಪಾಲ್ಗೊಂಡಿದ್ದು ಪ್ರಥಮ ಸ್ಥಾನವನ್ನು ಗಳಿಸಿದ ಕುಮದ್ವತಿ ಎ ತಂಡ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಕುಮದ್ವತಿ ಬಿ ತಂಡಕ್ಕೆ ಕ್ರಮವಾಗಿ ನಗದು ರೂ.11111 ಹಾಗೂ ರೂ.6666 ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಿವರಾಜ್, ಪ್ರ.ಕಾ. ಸಿದ್ದಲಿಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗುರುಮೂರ್ತಿ, ತಾಪಂ ಅಧ್ಯಕ್ಷ ಸುಬ್ರಹ್ಮಣ್ಯ ಕವಲಿ, ಪುರಸಭಾ ಸದಸ್ಯ ಪರಶುರಾಮಚಾರ್ಗಲ್ಲಿ, ಹಾಲಪ್ಪ, ಸುಕೇಂದ್ರಪ್ಪ, ಡಿ.ಎಸ್. ಈಶ್ವರಪ್ಪ, ಮಲ್ಲೇಶಪ್ಪ, ನಾಗರಾಜ ಕೊರಲಹಳ್ಳಿ ಮತ್ತಿತರರು ಹಾಜರಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post