ಶಿವಮೊಗ್ಗ: ಶಿವಮೊಗ್ಗ ರಂಗಾಯಣದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ `ಚಿಣ್ಣರ ರಂಗೋತ್ಸವ’ ಎಪ್ರಿಲ್ 29 ಮತ್ತು 30ರಂದು ನಡೆಯಲಿದ್ದು, ಮಕ್ಕಳಿಂದ ಒಟ್ಟು 8ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ನಿರ್ದೇಶಕ ಡಾ.ಗಣೇಶ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಎಪ್ರಿಲ್ 12ರಿಂದ ಆರಂಭಗೊಂಡ ಈ ಶಿಬಿರದಲ್ಲಿ ಒಟ್ಟು 248 ಮಕ್ಕಳು ಭಾಗವಹಿಸಿದ್ದು ಅವರಿಗೆ ರಂಗಸಂಗೀತ, ಚಿತ್ರಕಲೆ, ಶಿಲ್ಪಕಲೆ, ಚಲನಚಿತ್ರ ಪ್ರದರ್ಶನ, ಕಥನ ಕಲೆ, ಅಗ್ನಿಶಾಮಕ ಪ್ರಾತ್ಯಕ್ಷಿಕೆ ಹಾಗೂ ಕಿರು ನಾಟಕ ಪ್ರದರ್ಶನ, ನಾಟಕ ತಯಾರಿಯ ಬಗೆಗಳು, ರಂಗಭೂಮಿಯ ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ತರಗತಿಗಳನ್ನು ನಡೆಸಲಾಗಿದೆ ಎಂದರು.
ಶಿಬಿರಾರ್ಥಿಗಳನ್ನು ಎಂಟು ತಂಡಗಳಾಗಿ ವಿಂಗಡಿಸಲಾಗಿದ್ದು ಪ್ರತಿಯೊಂದು ತಂಡಕ್ಕೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮರಗಳ ಹೆಸರುಗಳನ್ನು ಇಡಲಾಗಿದೆ. ರಂಗಾಯಣದ ರೆಪರ್ಟರಿಯ ಕಲಾವಿದರು ಹಾಗೂ ಹೊರಗಿನ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಮಕ್ಕಳಿಗೆ ನಾಟಕ ನಿರ್ದೇಶನ ಮಾಡಲಾಗಿದೆ. ಎಪ್ರಿಲ್ 29ರಂದು `ನಾನು ವಿಜ್ಞಾನಿಯಾಗುವೆ’, `ಕೃಷ್ಣ ಲೀಲೆ’, `ನಮ್ಮ ಕಥೆ’ ಹಾಗೂ ` `ಬೇಲಿಯೇ ಎದ್ದು ಹೊಲ ಮೇಯ್ದರೆ’ ನಾಟಕ ಪ್ರದರ್ಶನ ನಡೆಯಲಿದೆ. ಎಪ್ರಿಲ್ 30ರಂದು `ಬದುಕಿನ ಬಣ್ಣ’, `ಇರುವೆಗಳ ಯುದ್ಧ’, `ಮೃಗ ಮತ್ತು ಸುಂದರಿ’ ಹಾಗೂ `ಚಲಿಸುವ ಮರ’ ನಾಟಕವನ್ನು ಮಕ್ಕಳು ಪ್ರದರ್ಶಿಸಲಿದ್ದಾರೆ ಎಂದರು.
ಚಿಣ್ಣರ ರಂಗೋತ್ಸವ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಅಗಲಿದ ರಂಗಕರ್ಮಿ ಎಸ್.ಮಾಲತಿ ಅವರಿಗೆ ರಂಗ ನಮನ ಸಲ್ಲಿಸಲಾಗುವುದು. ಸಮರೋಪ ಸಮಾರಂಭದಲ್ಲಿ ರಂಗಕರ್ಮಿ ಪುರುಷೋತ್ತಮ ತಲವಾಟ, ಚಿಂತಕಿ ಡಾ.ಕೆ.ಶರೀಫ, ಕಲಾವಿದರ ಒಕ್ಕೂಟದ ಲವ ಜಿ.ಆರ್., ಪತ್ರಕರ್ತ ಎಂ.ರಾಘವೇಂದ್ರ, ಅನನ್ಯ ವಿದ್ಯಾಪೀಠದ ಆರ್.ಗಿರೀಶ್ ಭಾಗವಹಿಸುವರು ಎಂದರು.
ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್, ಬೇಸಿಗೆ ಶಿಬಿರದ ನಿರ್ದೇಶಕ ಚಂದ್ರು ತಿಪಟೂರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.







Discussion about this post