ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ರಸ್ತೆಗಳು ಹಾಳಾಗಿದ್ದು, ನಗರದ ಜನರಿಗೆ ತೊಂದರೆಯಾಗುತ್ತಿದೆ ನಿಜ. ಆದರೆ, ಮುಂದಿನ ಮೂರು ತಿಂಗಳ ಒಳಗಾಗಿ ನಗರದ ರಸ್ತೆಗಳಿಗೆ ಒಂದು ಹೊಸ ರೂಪ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಮಾತನಾಡಿದ ಅವರು, ಒಂದು ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕು ಎಂದರೆ ಅದರಿಂದ ಒಂದಷ್ಟು ತಾತ್ಕಾಲಿಕ ತೊಂದರೆಗಳು ಆಗುತ್ತವೆ. ಆದರೆ, ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ತೊಂದರೆಯಾಗುತ್ತಿದ್ದರೂ ಸಹ ಅಭಿವೃದ್ಧಿಗಾಗಿ ಜನರು ಇದನ್ನು ಸಹಿಸಿಕೊಂಡಿದ್ದಾರೆ. ಹೀಗಾಗಿ, ಈಗಾಗಲೇ ವೇಗವಾಗಿ ಸಾಗುತ್ತಿರುವ ಕಾಮಗಾರಿಯನ್ನು ಮತ್ತಷ್ಟು ಚುರುಕುಗೊಳಿಸಿ ಮುಂದಿನ ಮೂರು ತಿಂಗಳ ಒಳಗಾಗಿ ನಗರದ ರಸ್ತೆಗಳಿಗೆ ಒಂದು ರೂಪ ನೀಡಲಾಗುವುದು ಎಂದರು.

ಸ್ಮಾರ್ಟ್‌ಸಿಟಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಮಾದರಿ ನಗರವಾಗಿ ರೂಪುಗೊಳ್ಳಲಿದೆ ಎಂದರು.
ಕಾಮಗಾರಿಗಳನ್ನು ಖುದ್ದು ವೀಕ್ಷಿಸಿದ್ದು, ಕೆಲವು ಕಡೆಗಳಲ್ಲಿ ನ್ಯೂನತೆಗಳಿರುವುದನ್ನು ಗುರುತಿಸಲಾಗಿದ್ದು, ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉಳಿದಂತೆ ಪ್ರಗತಿಯಲ್ಲಿರುವ ಕಾಮಗಾರಿಗಳ ವೀಕ್ಷಣೆ ತೃಪ್ತಿಕರವಾಗಿದೆ ಎಂದರು.

ಎಂಟು ಎಕರೆ ವಿಸ್ತೀರ್ಣದಲ್ಲಿ ಕೈಗೊಂಡ ಪ್ರೀಡಂ ಪಾರ್ಕ್‌ನ ಅಭಿವೃದ್ಧಿ ಕಾರ್ಯಗಳು ಮುಕ್ತಾಯ ಹಂತದಲ್ಲಿದೆ. ಮುಂದಿನ ಮಳೆಗಾಲ ಆರಂಭವಾಗುವುದರೊಳಗಾಗಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡು ಶಿವಮೊಗ್ಗ ನಗರಕ್ಕೆ ಹೊಸ ಕಳೆ ಬರಲಿದೆ. ರಾಜೇಂದ್ರನಗರದ ಇಕ್ಕೆಲಗಳಲ್ಲಿನ ಚಾನಲ್, ರಸ್ತೆಗಳಲ್ಲಿ ಬಿದ್ದಿದ್ದ ಭಾರೀ ಪ್ರಮಾಣದ ಮಣ್ಣನ್ನು ತೆಗೆದು, ಹಸಿರು ವಾತಾವರಣ, ಉದ್ಯಾನವನ ನಿರ್ಮಿಸಲು ಹಾಗೂ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಚಾನಲ್ ಆರಂಭದಿಂದ ಮುಕ್ತಾಯದ ಅವಧಿಯವರೆಗೆ ಚಾನಲ್‌ಗಳಲ್ಲಿನ ಕಸವನ್ನು ತೆಗೆದು ಸದಾ ಶುದ್ಧ ನೀರು ಹರಿಯುತ್ತಿರುವಂತೆ ನಿರ್ಮಿಸಲು ನೋಡಿಕೊಳ್ಳಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಕರ್ನಾಟಕ ನೀರಾವರಿ ನಿಗಮ ಹಾಗೂ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲು ಮಾರ್ಚ್ ಮೊದಲ ವಾರದಲ್ಲಿ ಸಭೆ ಏರ್ಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನಗರದ ತಿಲಕ್‌ನಗರ, ಕುವೆಂಪು ರಸ್ತೆ, ರಾಜೇಂದ್ರ ನಗರ, ಬಾಲರಾಜ್ ಅರಸ್‌ರಸ್ತೆ, ಫ್ರೀಡಂ ಪಾರ್ಕ್, ಆಲ್ಕೊಳ ಸರ್ಕಲ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಚನ್ನಬಸಪ್ಪ, ಸೇರಿದಂತೆ ಆಯಾ ವಾರ್ಡುಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post