ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಮನೋಧೈರ್ಯ ತುಂಬುವಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಲಿಕಾ ಪುನಶ್ಚೇತನ ಕಾರ್ಯಾಗಾರ ಯಶಸ್ವಿಯಾಗಲಿ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಹಾರೈಸಿದರು.
ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಲಿಕಾ ಪುನಶ್ಚೇತನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್. ಮಂಜುನಾಥ್ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯ ಸುಧಾರಿಸಲು ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘಟನೆಯು ಶಿಕ್ಷಣ ಇಲಾಖೆಯ ಜೊತೆ ಕೈಜೋಡಿಸಿರುವುದು ಬಹುಷಃ ರಾಜ್ಯದಲ್ಲೇ ಪ್ರಥಮ ಪ್ರಯತ್ನ. ಇಂತಹ ಹಿರಿಯರಲ್ಲಿನ ಅನುಭವವನ್ನು ಸಮಾಜ ಪಡೆದರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಲಿಕೆಯೊಂದೇ ಅಲ್ಲದೇ ನಡವಳಿಕೆಯಲ್ಲೂ ಕೆಲವು ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಮುಂದೆ ಸಲಹಾ ಕಾರ್ಯಕ್ರಮದ ಮೂಲಕ ಅವರನ್ನು ತಿದ್ದುವ ಪ್ರಯತ್ನ ಮಾಡಲಾಗುವುದು ಎಂದವರು ತಿಳಿಸಿದರು.
ಕಾರ್ಯಕ್ರಮ ಸಂಚಾಲಕ ಹಾಗೂ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎನ್.ಎಸ್. ಕುಮಾರ್ ಮಾತನಾಡಿ, ಶಿವಮೊಗ್ಗದ ದುರ್ಗಿಗುಡಿ, ಮಿಳ್ಳಗಟ್ಟ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ, ಇಂಗ್ಲೀಷ್ ಮತ್ತು ವಿಷಯಗಳಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಾಗಾರವನ್ನು ವಿಶೇಷವಾಗಿ ಅಣಿಗೊಳಿಸಲಾಗಿದೆ ಎಂದು ತಿಳಿಸಿದರು.
ಒಟ್ಟು ಮೂರು ಹಂತಗಳಲ್ಲಿ ಚಟುವಟಿಕೆ ಕೈಗೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ಕಲಿಯುವ ಆಸಕ್ತಿಯು ಪ್ರತೀ ಹಂತದಲ್ಲೂ ವೃದ್ಧಿಯಾಗಿರುವ ಬಗ್ಗೆ ಖಚಿತಪಡಿಸಿ ಹಾಗೂ ಏನಾದರೂ ನ್ಯೂನತೆಗಳಿದ್ದಲ್ಲಿ ಅವುಗಳನ್ನೂ ಸರಿಪಡಿಸಿ ಎಸ್’ಎಸ್’ಎಲ್’ಸಿಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬರುವಂತೆ ಗಮನ ಕೊಡಲಾಗುತ್ತದೆ ಎಂದರು.
ವಿಶ್ರಾಂತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಶ್ರೀನಿವಾಸರಾವ್ ಮಾತನಾಡಿ, ನಾಳಿನ ಜನಾಂಗ ರೂಪಿಸುವಲ್ಲಿ ವಿದ್ಯಾರ್ಥಿಗಳ ಏಳಿಗೆಗೆ ತಮ್ಮ ಸಂಘವು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ವಿಶ್ರಾಂತ ನೌಕರರ ಸಂಘದ ಅಧ್ಯಕ್ಷ ಪಿ.ಓ. ಶಿವಕುಮಾರ್, ಸಂಘದ ಗೌರವ ಅಧ್ಯಕ್ಷ ಟಿ.ಜಿ. ರವಿಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜಂಟಿ ಕಾರ್ಯದರ್ಶಿ ರವಿಕುಮಾರ್, ವಿಷಯ ಪರಿಣಿತ ಶ್ರೀಧರ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶಾಲಾಮಕ್ಕಳು ಪ್ರಾರ್ಥಿಸಿ, ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಸ್ವಾಗತ ಕೋರಿದರು. ಡಾ.ಸುಧೀಂದ್ರ ಕಾರ್ಯಕ್ರಮ ನಿರೂಪಿಸಿ, ಕೆ.ಜಿ. ಮಂಜುನಾಥ ಶರ್ಮ ವಂದಿಸಿದರು.
Get in Touch With Us info@kalpa.news Whatsapp: 9481252093
Discussion about this post