ಶಿವಮೊಗ್ಗ: ಮಲೆನಾಡಿನಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಡಿಯ ಸೀಮೆ ಸಂತಸದಲ್ಲಿದೆ. ಇದೇ ವೇಳೆ ಬಹುತೇಕ ರಸ್ತೆಗಳು ದುಸ್ಥಿತಿಗೆ ತಲುಪಿ ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿವೆ.
ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ವತಃ ಅವರು ವಿಶೇಷ ಮುತುವರ್ಜಿ ವಹಿಸಿ, ಭವಿಷ್ಯದ ಸಂಚಾರ ದಟ್ಟಣೆಯನ್ನು ಊಹಿಸಿ, ಶಿವಮೊಗ್ಗ-ಭದ್ರಾವತಿ ನಡುವೆ ಚತುಷ್ಪಥ ಹೆದ್ದಾರಿ ನಿರ್ಮಾಣ ಮಾಡಿದ್ದರು. ಆದರೆ, ಈ ಹೆದ್ದಾರಿ ಈಗ ಗುಂಡಿ ಗೊಟರುಗಳಿಂದ ಕೂಡಿದ್ದು ದುರಸ್ಥಿಗಾಗಿ ಕಾದಿದೆ.
ಭದ್ರಾವತಿಯಿಂದ ಶಿವಮೊಗ್ಗ ಮಾರ್ಗವಾಗಿ ಬಿಳಿಕಿ ಕ್ರಾಸ್‌ನಲ್ಲಿ ಚತುಷ್ಪಥ ಹೆದ್ದಾರಿಯನ್ನು ಸಂಪರ್ಕಿಸಿದ ಆರಂಭದಲ್ಲೇ ಸಣ್ಣಪುಟ್ಟ ಗುಂಡಿಗಳು ಸ್ವಾಗತಿಸುತ್ತವೆ. ಅಲ್ಲಿಂದ ಆರಂಭವಾಗಿ ಜೇಡಿಕಟ್ಟೆ ದಾಟಿದರೆ ಬೃಹತ್ ಗುಂಡಿಗಳು ಸವಾರರ ಬಲಿ ಪಡೆಯಲು ಕಾದು ಕುಳಿತಿವೆ.
ಕೆಲವೊಂದು ಗುಂಡಿಗಳು ಸುಮಾರು ಒಂದರಿಂದ ಒಂದೂವರೆ ಅಡಿಗಳಷ್ಟು ಆಳವಿದ್ದು, ನಾಲ್ಕು ಚಕ್ರ ಹಾಗೂ ದ್ವಿಚಕ್ರ ವಾಹನಗಳು ಇದರಲ್ಲಿ ಇಳಿದರೆ ಅಪಾಯ ನಿಶ್ಚಿತ.
ಇನ್ನು, ಮಾಚೇನಹಳ್ಳಿ ಐಟಿ ಪಾರ್ಕ್, ಮಲವಗೊಪ್ಪ ಸೇರಿದಂತೆ ಹಲವು ಕಡೆಗಳಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿದ್ದು, ಈಗಾಗಲೇ ಹಲವಾರು ದ್ವಿಚಕ್ರ ವಾಹನಗಳು ಇಲ್ಲಿ ಅಪಘಾತಕ್ಕೀಡಾಗಿವೆ.
ಅಲ್ಲದೇ ಅತ್ಯಂತ ಪ್ರಮುಖವಾಗಿ, ಹೆದ್ದಾರಿಯ ಎರಡೂ ಬದಿ ರಸ್ತೆಗಳು ಹಲವು ತಿಂಗಳುಗಳಿಂದ ಬಿರುಕು ಬಿಟ್ಟಿದ್ದು, ಇವೇ ಗುಂಡಿಗಳಾಗಿ ಮಾರ್ಪಟ್ಟಿವೆ.
ಈ ಬಾರಿ ಮಳೆ ಹೆಚ್ಚಾಗಿರುವ ಹಾಗೂ ವಾಹನ ಸಂಚಾರವೂ ಸಹ ಅಧಿಕವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಬಹಳಷ್ಟು ದುಸ್ಥಿತಿಗೆ ತಲುಪಿದೆ.
ಇನ್ನು, ಮಲವಗೊಪ್ಪ ಕಾಡಾ ಕಚೇರಿ ಎದುರಲ್ಲಿ ಬಹಳ ವರ್ಷಗಳಿಂದ ಚರಂಡಿ ಎನ್ನುವುದು ಮರೀಚಿಕೆಯಾಗಿದೆ. ಒಮ್ಮೆ ಸಣ್ಣ ಮಳೆ ಬಂದರೆ ಈ ಭಾಗದ ಹೆದ್ದಾರಿಯಲ್ಲಿ ಸಂಪೂರ್ಣ ನೀರು ನಿಲ್ಲುತ್ತದೆ.
ಅಲ್ಲದೇ ಈ ಸ್ಥಳದಲ್ಲಿ ರಸ್ತೆ ಗುಂಡಿಯೂ ಏರ್ಪಟ್ಟಿದ್ದು, ನೀರು ನಿಂತ ವೇಳೆ ತಿಳಿಯದೇ ಹಲವಾರು ದ್ವಿಚಕ್ರ ವಾಹನ ವಾಹನಗಳು ಅಪಘಾತಕ್ಕೀಡಾಗಿವೆ
ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ತತಕ್ಷಣವೇ ಇತ್ತ ಗಮನ ಹರಿಸಿ, ಹೆದ್ದಾರಿಯನ್ನು ದುರಸ್ಥಿಗೊಳಿಸಬೇಕು ಎನ್ನುವುದು ಸ್ಥಳೀಯರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
Discussion about this post