ಶಿವಮೊಗ್ಗ: ಬೇಹುಗಾರಿಕಾ ಉಪಗ್ರಹವನ್ನು ಭಾರತ ಹೊಡೆದುಹಾಕುವ ಮೂಲಕ ದೇಶ ಮಹತ್ವದ ಸಾಧನೆ ಮಾಡಿದೆ ಎಂದು ನಿನ್ನೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ದೂರು ದಾಖಲಿಸಿದೆ.
ಜಿಲ್ಲಾ ಚುನಾವಣಾಧಿಕಾರಿಗಳಿಗೆ ಇಂದು ದೂರು ಸಲ್ಲಿಸಿರುವ ಯುವ ಕಾಂಗ್ರೆಸ್ ಮುಖಂಡರು, ನಿನ್ನೆ ಬೆಳಗ್ಗೆ ಪ್ರಧಾನಿಯವರು ಟ್ವೀಟ್ ಮಾಡಿ ದೇಶವನ್ನುದ್ದೇಶಿಸಿ ಮಾತನಾಡುವುದಾಗಿ ಟ್ವೀಟ್ ಮಾಡಿದ್ದರು. ಆನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ನಾವೀಗ ಉಪಗ್ರಹ ನಿಗ್ರಹ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದು, ಅಂತಹ ತಂತ್ರಜ್ಞಾನ ಹೊಂದಿರುವ ಅಮೆರಿಕಾ, ರಷ್ಯಾ, ಚೀನಾಗಳ ಜೊತೆಗೆ ನಮ್ಮದು ನಾಲ್ಕನೆಯ ರಾಷ್ಟ್ರವಾಗಿದೆ. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡಬೇಕಾದ ಸಂಗತಿಯಾಗಿದೆ ಎನ್ನುವ ಮೂಲಕ ನಮ್ಮೆಲ್ಲರ ಆತಂಕವನ್ನು ದೂರ ಮಾಡಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ, ಈ ಉಪಗ್ರಹ ನಿಗ್ರಹ ಕ್ಷಿಪಣಿ ಯೋಜನೆಯ ಕನಸು ಕಂಡವರು ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಈ ಕ್ಷಿಪಣಿಯ ಎ ಸ್ಪಾಟ್ ಯೋಜನೆಯನ್ನು 2008-09ರಲ್ಲಿ ಆರಂಭಿಸಿದ್ದರು. 2012ರ ವೇಳೆಗೆ ಈ ಪೃಥ್ವಿ ಮಿಸೈಲ್ ಪೂರ್ಣಗೊಳಿಸಲಾಗಿತ್ತು. ಈ ಕುರಿತು ಆಗಲೇ ಡಿಆರ್’ಡಿಒ ಅಧ್ಯಕ್ಷ ಹಾಗೂ ಈಗಿನ ನೀತಿ ಆಯೋಗದ ಸದಸ್ಯ ಡಾ. ವಿಜಯ್ ಸರಸ್ವತ್ ಅವರು ಭಾರತ ಅಂತರಿಕ್ಷದಲ್ಲಿ ಉಪಗ್ರಹಗಳನ್ನು ತೊಡೆದುಹಾಕುವ ಸಾಮರ್ಥ್ಯ ಗಳಿಸಿದೆ ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದರು ಎಂದಿದ್ದಾರೆ.
ಎಂದೂ ಮನಮೋಹನ್ ಸಿಂಗ್ ಅವರು ಈ ಸಾಧನೆಯ ಲಾಭ ಪಡೆದುಕೊಳ್ಳುವ ಕೆಳಮಟ್ಟಕ್ಕೆ ಇಳಿಯಲಿಲ್ಲ. ಆದರೆ ಪ್ರಧಾನಿ ಮೋದಿಯವರು ತಾವು ಪ್ರಧಾನಿಯಾದ ನಂತರವೇಙ ಇವೆಲ್ಲಾ ಸಾಧ್ಯವಾಯಿತು ಎಂಬಂತೆ ಬಿಂಬಿಸಿಕೊಂಡಿರುವುದು 130 ಕೋಟಿ ಜನರಿಗೆ ಚುನಾವಣೆಯ ಸಂದರ್ಭದಲ್ಲಿ ಈ ಹೇಳಿಕೆ ನೀಡಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ, ಇವರು ವಿರುದ್ಧ ಆಯೋಗ ಕೂಡಲೇ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ. ಪ್ರವೀಣ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಎಚ್.ಸಿ. ಯೋಗೀಶ್, ನಗರಾಧ್ಯಕ್ಷ ಎಚ್.ಪಿ. ಗಿರೀಶ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಪ್ರಮುಖರಾದ ಟಿ.ವಿ. ರಂಜಿತ್, ಆರ್. ಕಿರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Discussion about this post