ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ : ನಗರದ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸಿ, ವಿದ್ಯಾರ್ಥಿಗಳ ನಿರೀಕ್ಷೆಯಂತೆ ಮೂಲಭೂತ ಅಗತ್ಯತೆಗಳನ್ನು ಒದಗಿಸಿ, ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ನಗರದ ಸೀಗೆಹಟ್ಟಿ, ಕೆ.ಆರ್.ಪುರಂ ಮತ್ತು ಬಿ.ಬಿ.ಸ್ಟ್ರೀಟ್‌ನ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿಕಾಸಕ್ಕೆ ಕೊಡುಗೈ ದಾನಿಗಳಿಂದ ಆರ್ಥಿಕ ನೆರವು ಪಡೆದು, ಶಾಲಾ ಕೊಠಡಿ, ಸಭಾಂಗಣ, ಕಾಂಪೌಂಡ್, ಗ್ರಂಥಾಲಯ, ಶೌಚಾಲಯ, ಕ್ರೀಡಾಂಗಣ, ಕೊಠಡಿ ಸೇರಿದಂತೆ ಎಲ್ಲಾ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ನುಡಿದರು.
ಈಗಾಗಲೆ ನಗರದ ಒಟ್ಟು 87 ಸರ್ಕಾರಿ ಶಾಲೆಗಳಲ್ಲಿ 70 ಶಾಲೆಗಳನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಸ್ಮಾರ್ಟ್‌ಕ್ಲಾಸ್‌ಗಳನ್ನು ನಿರ್ಮಿಸಲಾಗಿದೆ. ಉಳಿದಂತೆ 17ಶಾಲೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎಂದ ಅವರು, ಸರ್ಕಾರ ಕೈಗೊಂಡ ನಿರ್ಣಯದಂತೆ ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರು ತಮ್ಮ ಕಾರ್ಯಕ್ಷೇತ್ರದ 3 ಶಾಲೆಗಳನ್ನು, ಸಚಿವರು 5 ಶಾಲೆಗಳನ್ನು ಹಾಗೂ ಮುಖ್ಯಮಂತ್ರಿಗಳು 10 ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಅಂತೆಯೇ ಸೀಗೆಹಟ್ಟಿಯ ಸರ್ಕಾರಿ ಶಾಲೆಯನ್ನು ಬೆಂಗಳೂರಿನ ಜಿವಿಪಿಆರ್ ಇಂಜಿನಿಯರ್ಸ್ ಲಿ., ಸಂಸ್ಥೆಯವರು ತಮ್ಮ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ಆಸಕ್ತಿವಹಿಸಿದ್ದು, ಫೆ.28ರಂದು ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದರು.
ಸದರಿ ಸಂಸ್ಥೆಯು ಈ ಶಾಲಾ ಕಟ್ಟಡದ ಅಭಿವೃಧ್ಧಿ ಚಟುವಟಿಕೆಗಳಿಗಾಗಿ 50ಲಕ್ಷ ರೂ.ಗಳನ್ನು ನೀಡಲು ಉದ್ದೇಶಿಸಿದ್ದು, ಅದರ ಮೊದಲ ಕಂತಿನ ಹಣ 25ಲಕ್ಷ ರೂ. ಚೆಕ್ಕನ್ನು ಸಂಸ್ಥೆಯ ಮುಖ್ಯಸ್ಥ ಜಯಪ್ರಕಾಶ್ ಅವರು ಸಚಿವರಿಗೆ ಹಸ್ತಾಂತರಿಸಿದರು. ಕೈಗೊಳ್ಳುವ ಎಲ್ಲಾ ಕಾಮಗಾರಿಗಳು ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳುವಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಶಾಲಾ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು.
ಕೆ.ಆರ್.ಪುರಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಮಾತನಾಡಿದ ಅವರು, ಸದರಿ ಶಾಲೆಯನ್ನು ಹೈದ್ರಾಬಾದ್‌ನ ಕೆಎಂವಿ ಸಂಸ್ಥೆಯ ಮುಖ್ಯಸ್ಥ ಶ್ರೀಹರ್ಷ ಅವರು 50ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಆಸಕ್ತಿ ತೋರಿದ್ದಾರೆ. ಅವರು ನೀಡುವ ಈ ನಿಧಿಯಿಂದ ಶಾಲಾ ಅಗತ್ಯತೆಗಳನ್ನು ಮುಂದಿನ 2 ತಿಂಗಳ ಅವಧಿಯೊಳಗಾಗಿ ಒದಗಿಸಲು, ಕಾಮಗಾರಿಗಳನ್ನು ಪೂರೈಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ತೋರದೆ, ಉತ್ತಮ ಶೈಕ್ಷಣಿಕ ಸೌಲಭ್ಯ ಒಳಗೊಂಡು ಶ್ರೀಮಂತವಾಗಿರುವ ಶಾಲೆಗಳಿಗೆ ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳನ್ನು ದಾಖಲಿಸುವಂತೆ ಮನವಿ ಮಾಡಿದ ಅವರು, ಪೋಷಕರ, ಶಿಕ್ಷಕರ ನಿರೀಕ್ಷೆಯಂತೆ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್, ಗನ್ನಿ ಶಂಕರ್, ಜಯರಾಮ್, ಸುನಿತಾ ಅಣ್ಣಪ್ಪ ಸೇರಿದಂತೆ ಆಯಾ ಶಾಲೆಯ ಮೇಲುಸ್ತುವಾರಿ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post