ಶಿವಮೊಗ್ಗ: ನೆರೆ ಹಾವಳಿ, ಭೂಕಂಪ, ಅಗ್ನಿ ಅವಘಡ, ಹೃದಯಾಘಾತ, ರಸ್ತೆ ಅಪಘಾತ ಸೇರಿದಂತೆ ಮತ್ತಿತರೆ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಿಕೊಳ್ಳುವುದು ಹಾಗೂ ರಕ್ಷಿಸುವುದು ಅಗತ್ಯ. ಜೀವ ಅಮೂಲ್ಯವಾದುದು, ಅಫಘಾತ ಹಾಗೂ ಅವಘಡಗಳ ಸಂದರ್ಭದಲ್ಲಿ ಮತ್ತೊಬ್ಬರ ಜೀವ ರಕ್ಷಣೆಗೆ ಹಿಂಜರಿಯಬಾರದು ಎಂದು ರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆಯ ಸಭಾಧ್ಯಕ್ಷ ಎಸ್.ಪಿ. ದಿನೇಶ್ ಕರೆ ನೀಡಿದರು.
ಎಟಿಎನ್‌ಸಿಸಿ ಕಾಲೇಜು ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ 03-10-2019ರಂದು ಹಮ್ಮಿಕೊಳ್ಳಲಾಗಿದ್ದ ತುರ್ತು ಸಂದರ್ಭಗಳ ಜೀವರಕ್ಷಣಾ ತರಬೇತಿ ಕಾರ್ಯಾಗಾರವನ್ನು ಕೃತಕ ಉಸಿರಾಟದ ಪ್ರಾತ್ಯಕ್ಷಿಕೆಯ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಯ ಕಲೆಯನ್ನು ಕಲಿತಲ್ಲಿ ಮತ್ತೊಬ್ಬರ ಪ್ರಾಣ ಉಳಿಸಬಹುದು. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಜೀವರಕ್ಷಣೆಯ ಕಲೆಯನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಉಪಸಭಾಪತಿ ಹಾಗೂ ರಾಷ್ಟ್ರಮಟ್ಟದ ತರಬೇತುದಾರ ಡಾ. ವಿಎಲ್’ಎಸ್ ಕುಮಾರ್ ಮಾತನಾಡಿ ತುರ್ತು ಸಂದರ್ಭಗಳಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ವಿಕೋಪದ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಭಯಗೊಂಡಲ್ಲಿ ಮನೋಸ್ಥೈರ್ಯ ಕುಗ್ಗುತ್ತದೆ. ಆದ್ದರಿಂದ ಇದಕ್ಕೆ ಅವಕಾಶ ಕೊಡಬಾರದು ಎಂದರು.ರೆಡ್‌ಕ್ರಾಸ್ ಜಿಲ್ಲಾ ಶಾಖೆಯ ವಸಂತ್, ಎಟಿಎನ್‌ಸಿಸಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್.ಎಂ. ಸುರೇಶ್, ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ.ಕೆ.ಎಂ. ನಾಗರಾಜ್ ಉಪಸ್ಥಿತರಿದ್ದರು.
ತೀರ್ಥಹಳ್ಳಿಯ ಪ್ರಥಮ ದರ್ಜೆ ಕಾಲೇಜು, ಭದ್ರಾವತಿಯ ಜಿಎಫ್’ಜಿಸಿ, ಶಿವಮೊಗ್ಗದ ಬಾಪೂಜಿ ಪ್ರಥಮ ದರ್ಜೆ ಕಾಲೇಜು, ಕಮಲಾ ನೆಹರು, ಜೆಎನ್’ಎನ್ ಇಂಜಿನಿಯರಿಂಗ್, ಎಟಿಎನ್‌ಸಿಸಿ ಕಾಲೇಜಿನ ರೆಡ್‌ಕ್ರಾಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Discussion about this post