ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಫೆ.21ರಂದು ನಗರದ ಕಮಲಾ ನೆಹರು ಕಾಲೇಜಿನಲ್ಲಿ ಸಾರ್ವಜನಿಕರಿಗೆ ಪದಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬಳಗದ ಕಾರ್ಯದರ್ಶಿ ಆರ್. ಅಚ್ಯುತರಾವ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ರಿಂದ 12ರವರೆಗೆ ಈ ಸ್ಪರ್ಧೆ ನಡೆಯಲಿದೆ. 10 ಗಂಟೆಯಿಂದ ಸ್ಪರ್ಧಾ ಸ್ಥಳದಲ್ಲೇ ನೋಂದಣಿ ಇರುತ್ತದೆ. ಪ್ರವೇಶ ಶುಲ್ಕ ಒಬ್ಬರಿಗೆ 20 ರೂ. ನಿಗದಿ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ 8 ಪದಬಂಧಗಳನ್ನು ಬಿಡಿಸಬೇಕಾಗುತ್ತದೆ. ಇದರಲ್ಲಿ ಒಂದು ಸಂಖ್ಯಾಬಂಧ ಎಂಬ ವಿಭಿನ್ನತೆಯೂ ಇದೆ. ಸ್ಪರ್ಧೆಯಲ್ಲಿ ಭಾಗವಹಿಸಲು ವಯೋಮಿತಿಯಿಲ್ಲ. ಸ್ಪರ್ಧಾಸಮಯದಲ್ಲಿಯೂ ಮೊಬೈಲ್ ಬಳಕೆಗೆ ಅವಕಾಶವಿರುತ್ತದೆ. ಆದರೆ, ಮಾತನಾಡುವಂತಿಲ್ಲ ಎಂದು ತಿಳಿಸಿದರು.
ಮಾರ್ಚ್ 7ರಂದು ಕರ್ನಾಟಕ ಸಂಘದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಪ್ರಥಮ ಬಹುಮಾನ 3000ರೂ., ದ್ವಿತೀಯ ಬಹುಮಾನ 2000 ರೂ., ತೃತೀಯ ಬಹುಮಾನ 1000ರೂ. ಹಾಗೂ ತಲಾ 500ರೂ. ನ ನಾಲ್ಕು ಸಮಾಧಾನಕರ ಬಹುಮಾನಗಳಿವೆ. ಈ ಕಾರ್ಯಕ್ರಮದ ವಿವರವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು.
ಕಳೆದ ವರ್ಷ ಇದೇ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಇದನ್ನು ಬೆಂಗಳೂರು, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ ಹಲವಡೆ ಆಯೋಜಿಸುವಂತೆ ಬೇಡಿಕೆಯೂ ಬಂದಿದ್ದು, ಸಿದ್ಧರಾಗುತ್ತಿದ್ದೆವು. ಆದರೆ, ಕೋವಿಡ್ ಲಾಕ್ ಡೌನ್ ನಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದ ಅವರು, ಅಜೇಯ ಸಂಸ್ಕೃತಿ ಬಳಗವು ಸರಸ್ವತೀ ಸಾಕ್ಷಾತ್ಕಾರ, ಹಳೆಯ ಹಾಡುಗಳಿಗೆ ನೃತ್ಯ, ಹಳೆ ಕಥೆ, ಹೊಸ ಕಿವಿ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಳಗದ ಗೌರವಾಧ್ಯಕ್ಷ ಜಿ.ಎಸ್. ನಾಗರಾಜು, ಉಪಾಧ್ಯಕ್ಷರಾದ ಡಾ. ಚಿತ್ರಲೇಖಾ, ಎಸ್. ನಾಗೇಶ್, ನಿರ್ದೇಶಕರಾದ ಆಚಿ ಪ್ರಕಾಶ್, ಜಿ.ಎಸ್. ಅನಂತ, ಹರೀಶ್ ಕಾರ್ಣಿಕ್, ಚೇತನ್ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post