ಹಿರಿಯ ಮಿತ್ರರಾದ ಲಕ್ಷ್ಮೀನಾರಾಯಣ ಕಾಶಿ ಫೋನು ಮಾಡಿ ಬೆಳಿಗ್ಗೆ ಹನ್ನೊಂದಕ್ಕೆ ಬಂದರೆ ಟಿವಿ9 ಕಾರ್ಯಾಲಯಕ್ಕೆ ಹೋಗಬಹುದು. ನೀನೂ ಶರ್ಮ ಬರ್ರಿ ಎಂದರು. ಅವರ ಮನೆಗೆ ನಾನೂ ಶರ್ಮ ಅವರು ಹೋದೆವು.
ಅವರು ತಮ್ಮ ಮತ್ತು ಡಾ. ಯಶೋಧಾ ಕಾಶಿಯವರ ಅಪೇಕ್ಷೆ ಮೇರೆಗೆ ಶಿವಮೊಗ್ಗದ ಪ್ರವಾಹ ಸಂತ್ರಸ್ತರಿಗೆ ಒಂದಿಷ್ಟು ಪರಿಹಾರ ಸಾಮಗ್ರಿಗಳನ್ನು ಹೊಸದಾಗಿ ಖರೀದಿಸಿ, ಪ್ಯಾಕ್ ಮಾಡಿ ಇಟ್ಟಿದ್ದನ್ನು ನೋಡಿದೆವು.
ಇವನ್ನೆಲ್ಲ ಟಿವಿ9 ಕಚೇರಿಗೊಯ್ಯೋಣ ಬರ್ರೋ.! ಎಂದು ನಮ್ಮನ್ನು ಕರೆದು ತಮ್ಮ ಕಾರಿನಲ್ಲಿ ಕೂರಲು ಹೇಳಿದರು. ಕಾಶಿ ದಂಪತಿಗಳು ಹಿಂದಿನ ದಿನಗಳು ಟಿವಿಗಳಲ್ಲಿ ಪ್ರವಾಹ ಸಂತ್ರಸ್ತರ ಕರುಳು ಕಿವುಚುವ ಮಾತುಗಳನ್ನು ಕೇಳಿ, ನೋಡಿ ನೊಂದಿದ್ದರು.
ಈರ್ವರೂ ಅಗತ್ಯವಾಗಬಹುದಾದ ಹೊಸ ಸೀರೆಗಳು, ಪೆಟಿಕೋಟ್, ಶರ್ಟುಗಳು, ಬೆಡ್ ಶೀಟುಗಳು, ಟವಲ್, ನ್ಯಾಪ್’ಕಿನ್, ನೈಟಿ, ಅಕ್ಕಿ, ಬೇಳೆ, ಸಕ್ಕರೆ, ಟೀ ಪುಡಿ, ಬೆಲ್ಲ ಇತ್ಯಾದಿಗಳನ್ನು ಸಿದ್ಧಗೊಳಿಸಿದ್ದರು.
ಅವರ ಜತೆ ಮಾಜಿ ಕಾರ್ಪೋರೇಟರ್ ಸತೀಶ್ ಅವರೂ ದೊಡ್ಡ ಬಿಸ್ಕತ್ ಪೆಟ್ಟಿಗೆಯನ್ನೇ ತಂದು ನಮ್ಮ ಜತೆಗೂಡಿದರು. ಇವನ್ನೆಲ್ಲ ಬರೀ ಬೇಡವೋ.. ಸುಮ್ನೆ ಯಾಕೆ, ಪ್ರಚಾರ ಬೇಡ! ಅಂತ ಕಾಶಿ ಅವರ ಮಾಮೂಲಿ ಹವ್ಯಕ ದಾಟಿಯಲ್ಲೇ ಹೇಳಿದರು.
ಪ್ರಚಾರವಲ್ಲ ಬೇರೆ ಯಾರಾದರೂ ಸಂತ್ರಸ್ತರಿಗೆ ಏನೇನು ಕೊಡುಗೆ ನೀಡಬಹುದು ಎಂಬುದಕ್ಕೆ ಇದೊಂದು ರೀತಿ (ಚೆಕ್ ಲಿಸ್ಟ್) ಸಿದ್ದಪಟ್ಟಿ ಇದ್ದಹಾಗೆ ಅಷ್ಟೆ ಎಂದು ಉತ್ತರಿಸಿದೆ.
ಟಿವಿ9 ಕಚೇರಿ ತಲುಪಿದೆವು. ಪ್ರತಿನಿಧಿ ಮಿತ್ರ ಬಸವರಾಜ್ ಇಂತಹ ಕೊಡುಗೈ ದಾತರ ನಿರೀಕ್ಷೆಯಲ್ಲೇ ಕಾಯುತ್ತಿದ್ದರು. ಅವರಿಗೆ ಸಾಮಗ್ರಿಗಳನ್ನು ಒಪ್ಪಿಸಿ ಕಾಶಿಯವರಿಗೆ ಪರಿಹಾರ ಕೇಂದ್ರವನ್ನು ಭೇಟಿ ಮಾಡೋಣ ನಡೆಯಿರಿ ಎಂದು ನಾನೂ ಮತ್ತು ಮಂಜುನಾಥ ಶರ್ಮ ಕೋರಿದೆವು.
ಶ್ರೀರಾಮಣ್ಣ ಶ್ರೇಷ್ಠಿ ಪಾರ್ಕ್ ತುಂಗೆಯ ಪ್ರವಾಹದ ಫಲವಾಗಿ ನಿರಾಶ್ರಿತರ ತಾಣವಾಗಿ ಮಾರ್ಪಟ್ಟಿತ್ತು. ಮೂರುದಿನಗಳ ಭಾರಿ ವರ್ಷಾಧಾರೆಯ ಪರಿಣಾಮವಾಗಿ ತುಂಗಾತೀರದ ತಗ್ಗು ಪ್ರದೇಶಗಳು ಜಲಾವೃತ. ನೋಡುನೋಡುತ್ತಿದ್ದಂತೆಯೇ ಆಳುಮುಳುಗುವಷ್ಟು ನೀರು ಮನೆಗಳೊಳಕ್ಕೆ ನುಗ್ಗಿತು ಹಠಾತ್ತನೆ ಗಂಗೆಯ ರಭಸಕ್ಕೆ ಮನೆಮಂದಿ ದಿಕ್ಕೇ ತೋಚದೆ ಇದ್ದಬದ್ದ ಕೈಗೆ ಸಿಗುವ ಸಾಮಾನು ಎತ್ತಿಕೊಂಡು ಹೊರಬರುವ ಸಾಹಸ ಮಾಡಿದರು. ಕೆಲವರಂತೂ ಬರಿಗೈಲೇ ಹೊರಟರು.
ಆದರೆ ನೆರೆಹೊರೆಯ ಮಂದಿ ಸಮಾಜ ಸೇವಾ ಸಂಸ್ಥೆಗಳು. ಶಿವಮೊಗ್ಗ ಮಹಾನಗರ ಪಾಲಿಕೆ ತಕ್ಷಣ ಕಾರ್ಯಪ್ರವೃತ್ತವಾಯಿತು! ಅಷ್ಟೂ ಜನಕ್ಕೆ ಹತ್ತಿರದ ರಾಮಣ್ಣಶ್ರೇಷ್ಠಿ ಪಾರ್ಕ್‌ನ ವಿಶಾಲ ತೆರೆದ ಮಂಟಪವೇ ಆಶ್ರಯತಾಣವಾಯಿತು.
ಹಿಂದೆ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಹೋರಾಟಗಾರರು ಜಾತಿಬೇಧ ಮರೆತು ದೇಶಭಕ್ತಿ ಹಾಗೂ ಕೋಮುಸಾಮರಸ್ಯದ ಬೀಜಬಿತ್ತಿದ ಮತ್ತು ಶ್ರೀವಿನಾಯಕ ಸ್ವಾಮಿಯ ವಿಗ್ರಹ ಸ್ಥಾಪನೆಯಿಂದ ಪಾವಿತ್ರ್ಯ ಪಡೆದ ಸ್ಥಳ.
ನಮಗೆ ಕಂಡ ದೃಶ್ಯವೆಂದರೆ ಹಿಂದೂ ಮತ್ತು ಮುಸ್ಲಿಂ ಬಾಂಧವ ಕುಟುಂಬಗಳು ಅಲ್ಲಿ ನಿರಾಶ್ರಿತರಾಗಿ ಒಂದುಗೂಡಿದ್ದರು.
ಸಂಕಷ್ಟಗಳು ಎದುರಾದಾಗ ಮಾನವೀಯತೆಯೊಂದೇ ನಮ್ಮನ್ನು ಮುನ್ನಡೆಸುವ ಚೇತನ. ಜೈನ ಸಂಘದ ಸ್ವಯಂಸೇವಕರು ಮತ್ತು ಹಿಂದೂ ಸಂಘಟನೆಗಳು ಅಲ್ಲಿ ಸೇವೆ ಸಲ್ಲಿಸುವ ಸದುದ್ದೇಶದಿಂದ ಕಲೆತಿದ್ದರು.
ಹಲವು ಮುಸ್ಲಿಂ ಸಮಾಜ ಸೇವಕ ಮುಂದಾಳುಗಳು ನಮಗೆ ಅಲ್ಲಿ ಮುಸ್ಲಿಂ ಮಹಿಳೆಯರ ಅಳಲನ್ನು ಕೇಳುತ್ತಿದ್ದ ದೃಶ್ಯ ನಮಗೆ ಕಾಣಸಿಕ್ಕಿತು. ಮುಸ್ಲಿಂ ಮಹಿಳೆಯೊಬ್ಬರು ಹೊಟ್ಟೆಹಸಿವಾಗಿದೆ ಎಂದು ನಮ್ಮ ಬಳಿ ತಮ್ಮ ಬೇಡಿಕೆಯಿಟ್ಟರು. ಕೂಡಲೇ ಸ್ವಯಂಸೇವಕರ ಬಳಿ ಅವರ ಬೇಡಿಕೆ ಮುಟ್ಟಿಸಿದೆವು. ಆ ಮುಂದಾಳು ಎರಡೂ ಕೈ ಮುಗಿದು ತಾಯಿ.. ಹದಿನೈದು ನಿಮಿಷ ತಾಳಿ. ತರಕಾರಿ ಬೇಯುತ್ತಿದೆ. ಅನ್ನ ಕೂಡ ರೆಡಿ.. ನಿಮಗೆ ಕಾಯಿಸುವುದಿಲ್ಲ! ಎಂದು ಅತ್ಯಂತ ವಿನಯ, ನಮ್ರತೆಯಿಂದ ಹೇಳಿದ್ದುದು ನಮಗೆ ಅಲ್ಲಿನ ಸ್ವಯಂಸೇವಕರ ತಾಳ್ಮೆ ಹಾಗೂ ಮನುಷ್ಯರನ್ನು ಆತ್ಮೀಯ ಕಾಳಜಿಯಿಂದ ಕಾಣುವ ಅವರ ಮನೋಧರ್ಮಕ್ಕೆ ಮೆಚ್ಚುಗೆ ಪಡುವಂತಾಯಿತು.
ಮಹಾನಗರ ಪಾಲಿಕೆ ಅಧಿಕಾರಿ ಶ್ರೀಮತಿ ಅನುಪಮಾ ಅವರು ಪರಿಹಾರದ ಕೇಂದ್ರದಲ್ಲಿ ಲಭ್ಯವಿರುವ ತುರ್ತುಸೇವೆಗಳ ಬಗ್ಗೆ ತಿಳಿಸಿದರು. ಕೇವಲ ಪಾಲಿಕೆಯೇ ಅಲ್ಲದೇ ಸಮಾಜ ಸೇವಕರು, ಸ್ವಯಂ ಸೇವಾಸಂಘ ಸಂಸ್ಥೆಗಳು, ಸಾರ್ವಜನಿಕರ ತುಂಬು ಸಹಕಾರ ಮತ್ತು ಭಾಗವಹಿಸುವಿಕೆಯಿಂದ ಪ್ರಸ್ತುತ ಪರಿಹಾರ ಕೇಂದ್ರದ ಕೆಲಸಗಳು ಸುಲಲಿತವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಇನ್ನೂ ಒಂದು ಮರೆಯದ ಮುಖ್ಯ ಸಂಗತಿ. ಮಹಾನಗರ ಪಾಲಿಕೆ ಕಮಿಷನರ್ ಶ್ರೀಮತಿ ಚಾರುಲತಾ ಸೋಮಲ್ ಅವರು (24 X 7) ಹಗಲಿರುಳೂ ಸಲ್ಲಿಸುತ್ತಿರುವುದು.
ರಾಮಣ್ಣ ಶ್ರೇಷ್ಠಿ ಪಾರ್ಕ್‌ನ ಪರಿಹಾರ ಕೇಂದ್ರಕ್ಕೆ ತಡರಾತ್ರಿಯವರೆಗೂ ಭೇಟಿ ನೀಡಿ ನಿರಾಶ್ರಿತರ ಸ್ಥಿತಿಗತಿಗಳ ಬಗ್ಗೆ ವಿಚಾರಿಸುತ್ತಿರುವ ಕಾಳಜಿಯನ್ನು ಇಲ್ಲಿಯ ಸ್ಥಳೀಯರು ಮನದುಂಬಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾಲಿಕೆಗೆ ಇಂತಹ ಅಧಿಕಾರಿ ಮಹಿಳೆ ಬಂದಿರುವುದು ಒಂದು ಭಾಗ್ಯವೇ ಎನ್ನುತ್ತಾರೆ.
ಹಲವು ಪರಿಹಾರ ಕೇಂದ್ರಗಳಿವೆ. ಚುರುಕಾಗಿ ಭೇಟಿ ನೀಡಿ ನಿರಾಶ್ರಿತರಿಗೆ ಏನೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಎಸ್’ಪಿ ನಂತರ ಡಿಸಿ ವರ್ಗಾವಣೆ ಕಂಡರು! ಇಂತಹ ಅಧಿಕಾರಿಗೂ ವರ್ಗಾವಣೆಯಾಗಿಬಿಟ್ಟರೆ ಎಂಬ ಆತಂಕ ಜನರಲ್ಲಿ ಮನೆಮಾಡಿದೆ. ಶ್ರೀಮತಿ ಚಾರುಲತಾ ಸೋಮಲ್ ಅವರನ್ನು ಇಲ್ಲೇ ಉಳಿಸಿಕೋ ದೇವರೆ ಎಂದು ಅಭಿಮಾನಿಗಳು ಮೊರೆಯಿಟ್ಟಿದ್ದಾರೆ.
-ಡಾ.ಸುಧೀಂದ್ರ
ಹಿರಿಯ ಸಲಹಾ ಸಂಪಾದಕರು
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
Kalpa Media House | Manipal | Manipal Institute of Technology (MIT), Manipal, a constituent unit of Manipal Academy of Higher...
Read moreDetails
















