ಶಿವಮೊಗ್ಗ: ಸಾಗರ ರಸ್ತೆಯಲ್ಲಿ ಕೆಲವು ವರ್ಷಗಳ ಹಿಂದೆ ಆರಂಭವಾಗಿದ್ದ ಘನತ್ಯಾಜ್ಯ ವಿಲೇವಾರಿ ಘಟಕ ಅಸಮರ್ಪಕ ನಿರ್ವಹಣೆಯಿಂದಾಗಿ ಮುಚ್ಚಿಹೋಗಿದೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ಸ್ವಚ್ಛ ಶಿವಮೊಗ್ಗ ಯೋಜನೆಯಡಿ ನಗರದ ಸಾಗರ ರಸ್ತೆಯಲ್ಲಿರುವ ಬಿಎಸ್ ಎಲ್ ಎನ್ ಕಛೇರಿ ಹಿಂಭಾಗದಲ್ಲಿ ಮ್ಯಾಗ್ನೆಟಿಕ್ ತಂತ್ರಜ್ಞಾನದ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭವಾಗಿತ್ತು. ಇಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ವಿಶೇಷ ಯಂತ್ರವನ್ನೂ ಅಳವಡಿಸಲಾಗಿದೆ.
ಶಿವಮೊಗ್ಗ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರಿಯವರು ಹಾಗೂ ಇತರೆ ಉದ್ಯಮಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಈ ಯಂತ್ರೋಪಕರಣಗಳನ್ನು ದಾನವಾಗಿ ಮಹಾನಗರ ಪಾಲಿಕೆ ಗೆ ಕೊಟ್ಟಿದ್ದರು. ಪಕ್ಕದಲ್ಲಿಯೇ ಮಹಾನಗರ ಪಾಲಿಕೆ 2016-17ರಲ್ಲಿ 14ನೆಯ ಹಣಕಾಸು ಅನುದಾನದಿಂಧ ಘನತ್ಯಾಜ್ಯ ನಿರ್ವಹಣೆ ಸಲಕರಣೆ ಸಂಗ್ರಹಣಾ ಹಾಗೂ ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಿತ್ತು.
ಅಲ್ಲದೆ ಇಲ್ಲಿ ಪಾಲಿಕೆ ಇದೇ ಮೇ ತಿಂಗಳಲ್ಲಿ ವಿಶೇಷವಾಗಿ ಇ-ತ್ಯಾಜ್ಯ ಸ್ವೀಕಾರ ಕೇಂದ್ರವನ್ನೂ ತೆರೆದಿತ್ತು.
ಆದರೆ ಇತ್ತೀಚೆಗೆ ನನ್ನ ಸಂಗ್ರಹದಲ್ಲಿದ್ದ ಇ-ತ್ಯಾಜ್ಯಗಳನ್ನು ನೀಡಲು ಈ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲಿನ ಚಿತ್ರಣವೇ ಬೇರೆಯಾಗಿತ್ತು. ಅಲ್ಲಿನ ಚಿತ್ರಗಳ ಹೈಲೆಟ್ಸ್ ಹೀಗಿದೆ ಓದಿ:
- ಅಲ್ಲಿ ಮೂರು ಜನ ಪೌರ ಕಾರ್ಮಿಕರು ಕೆಲಸ(?) ಮಾಡುತ್ತಿದ್ದು ಇಬ್ಬರು ಹಾಜರಿದ್ದರು.
- ಘಟಕ ಸಂಪೂರ್ಣ ನಿಲುಗಡೆಯಾಗಿದ್ದು ಕಾರ್ಮಿಕರನ್ನು ವಿಚಾರಿಸಿದಾಗ ಕಳೆದ ಸುಮಾರು 5 ತಿಂಗಳುಗಳಿಂದ ಪಾಲಿಕೆ ವಿದ್ಯುತ್ ಬಿಲ್
- ಪಾವತಿಸದಿದ್ದರಿಂದ ಕೆಇಬಿ ಇಲಾಖೆಯ ವರು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ.
- ಕಟ್ಟಡದ ಮೇಲ್ಭಾಗ ಹೊದಿಕೆ ಶೀಟ್ ಗಳು ಸಂಪೂರ್ಣ ಕಿತ್ತು ಹೋಗಿ ದಾನಿಗಳು ನೀಡಿದ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ನೇರ ಮಳೆ ನೀರಿನಲ್ಲಿ ತೊಯ್ದು ಹಾಳಾಗುತ್ತಿವೆ.
- ವಿದ್ಯುತ್ ಇಲ್ಲದೆ ನೀರು ವ್ಯವಸ್ಥೆ ಇರುವುದಿಲ್ಲ.
- ಇ- ತ್ಯಾಜ್ಯಕ್ಕೆ ಪ್ರತ್ಯೇಕ ಸಂಗ್ರಹಣಾ ವ್ಯವಸ್ಥೆ ಇರುವುದಿಲ್ಲ.
- ಮಹಾನಗರ ಪಾಲಿಕೆ 2016-17 ರಲ್ಲಿ 14 ನೆಯ ಅನುದಾನದಲ್ಲಿ ನಿರ್ಮಿಸಿದ ಘನತ್ಯಾಜ್ಯ ನಿರ್ವಹಣೆ ಸಲಕರಣೆ ಸಂಗ್ರಹಣಾ ಮತ್ತು ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿ ಉದ್ಘಾಟನೆ ಗೊಂಡ ದಿನದಿಂದಲೇ ಇದುವರೆಗೂ ಬೀಗ ಹಾಕಲಾಗಿದೆ.
- ಮುಖ್ಯರಸ್ತೆಯಿಂದ ಘಟಕಕ್ಕೆ ಯಾವುದೇ ರಸ್ತೆ ಇಲ್ಲವಾಗಿದ್ದು ಕೊಚ್ಚೆಯಲ್ಲಿ ನಡೆದುಕೊಂಡು ಹೋಗಬೇಕು.
- ಕಾರ್ಮಿಕರು ಪ್ರತಿದಿನ ಎರಡೂ ವೇಳೆ ತಮ್ಮ ಬಯೋಮೆಟ್ರಿಕ್ ಹಾಜರಾತಿಗಾಗಿ ದೂರದ ದ್ರೌಪದಮ್ಮ ಸರ್ಕಲ್’ಗೆ ಹೋಗಿ ಬರಬೇಕಾಗಿರುವುದರಿಂದ ಕೆಲಸದ ವೇಳೆಯನ್ನು ಅರ್ಧ ಗಂಟೆ ಮೊದಲು ನಿಲ್ಲಿಸುತ್ತಾರೆ.
- ಹಾಜರಿದ್ದ ಕಾರ್ಮಿಕರಿಗೆ ಕಳೆದ ಎರಡು ತಿಂಗಳಿಂದ ಸಂಬಳವಾಗಿಲ್ಲ ಎನ್ನುವ ಮಾಹಿತಿಯೂ ಬಂತು. ಇದು ಕೆಲಸಗಾರರ ಉತ್ಸಾಹಕ್ಕೆ ಕಡಿವಾಣ ಹಾಕುತ್ತದೆ.
- ಇಷ್ಟೆಲ್ಲಾ ನ್ಯೂನತೆಗಳು ಇ-ತ್ಯಾಜ್ಯ ಸೇರಿದಂತೆ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ತಡೆಯಾಗುವುದರಿಂದ ಸ್ವಚ್ಛ ಶಿವಮೊಗ್ಗ ನಗರ ಕಲ್ಪನೆ ಕೇವಲ ಕಾಗದದಲ್ಲಿ ಮತ್ತು ಭಾಷಣಗಳಿಗೆ ಸೀಮಿತ ವಾಗುತ್ತದೆ.
ಈ ಬಗ್ಗೆ ದಾನಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಗಮನಹರಿಸುವರೇ.
ಲೇಖನ: ತ್ಯಾಗರಾಜ ಮಿತ್ಯಾಂತ,
ಚೆನ್ನುಡಿ ಬಳಗ, ಶಿವಮೊಗ್ಗ
Discussion about this post