ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದೇಶದ ರೈತರ ಹಿತಕ್ಕಾಗಿ ಜಾರಿಗೊಳಿಸಲಾಗುತ್ತಿರುವ ಕೃಷಿ ಮಸೂದೆ ಕುರಿತಾಗಿ ಸತ್ಯವನ್ನು ಮುಚ್ಚಿಟ್ಟು, ಸುಳ್ಳು ಹೇಳುವ ಮೂಲ ರೈತರನ್ನು ಕಾಂಗ್ರೆಸ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ದೇಶದ ಬಡವರ, ಕೃಷಿಕರ ಕಣ್ಣೀರು ಒರೆಸುವಂತಾಗಬೇಕು ಎಂಬ ಗಾಂಧೀಜಿಯವರ ಕನಸನ್ನು ನಮ್ಮ ಸರ್ಕಾರ ಶ್ರಮಿಸುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೃಷಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಹಾಗೂ ರೈತ ಸಂಘದ ಕೆಲವು ಮುಖಂಡರು ರೈತರನ್ನು ತಪ್ಪು ದಾರಿಗೆ ಎಳೆಯುವ ಕಾರ್ಯ ಮಾಡುತ್ತಿದ್ದಾರೆ. ರೈತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್’ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ರೈತರಿಗೆ ಸ್ವಾಭಿಮಾನ ಬದುಕು ನೀಡಬೇಕು ಎಂಬ ಕಾರಣದಿಂದ ಇಂದಹ ಒಂದು ಮಹತ್ವದ ಕಾಯ್ದೆಯನ್ನು ಜಾರಿಗೆ ತರಲು ಹೆಜ್ಜಯಿಟ್ಟಿದೆ. ರಾಜ್ಯದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯೂ ಸಹ ಇದರ ಒಂದು ಭಾಗವಾಗಿದೆ. ಇವುಗಳ ಪ್ರಯೋಜನವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಪಕ್ಷದ ವತಿಯಿಂದ ಕಾರ್ಯ ಮಾಡಲಾಗುತ್ತಿದೆ ಎಂದರು.
ಕಳೆದ 6 ವರ್ಷದಲ್ಲಿ ರೈತರಿಗೆ ಅನುಕೂಲವಾಗುವ ಯೋಜನೆಗಳಪಟ್ಟಿಯೇ ಇದೆ. ಕಿರು ನೀರಾವರಿ, ಫಸಲ್ ಭೀಮಾ ಯೋಜನೆ, ರೈತರ ಎಫ್’ಬಿಒ ಗುಂಪು ನಿರ್ಮಾಣ, ಆತ್ಮನಿರ್ಭರ್ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅನೇಕ ವರ್ಷಗಳಿಂದ ಕಾಂಗ್ರೆಸ್’ಗೆ ಆಗದ ಕೆಲಸವನ್ನು ಪ್ರಧಾನಿ ಮೋದಿ ಮಾಡಿ ತೋರಿಸುದ್ದಾರೆ. ಆದರೆ, ಇದನ್ನು ಸಹಿಸದ ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು ಸುಳ್ಳು ಹೇಳುತ್ತಾ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಕಿಡಿ ಕಾರಿದರು.
ಕೋವಿಡ್’ನಂತಹ ತುರ್ತು ಪರಿಸ್ಥಿತಿಯಲ್ಲಿ ರೈತರಿಗೆ ಯಾವುದೇ ರೀತಿಯಲ್ಲೂ ಸಹ ತೊಂದರೆಯಾಗದಂತೆ ಸುಧಾರಣೆ ಮಾಡಲು ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಇದರಿಂತೆ ತೊಂದರೆಯಲ್ಲಿರುವ ರೈತರಿಗೆ ಸಹಕಾರಿಯಾಗಲಿದೆ. ಅಲ್ಲದೇ, ಕೃಷಿ ಪದವಿಧರರಿಗೆ ಈ ಕಾಯ್ದೆ ಅನುಕೂಲವಾಗಲಿದೆ. ತಮಿಳು ಮತ್ತು ಆಂಧ್ರದಲ್ಲಿ ಮಸೂದೆ ಜಾರಿಗೆಯಲ್ಲಿದ್ದು ರೈತರಿಗೆ ಅನುಕೂಲವಾಗಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















