ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನದಿಯನ್ನು ತಾಯಿ, ದೇವರು ಎಂದು ಕೇವಲ ಹೆಸರಿನಲ್ಲಿ ಪೂಜಿಸುವುದಲ್ಲ. ಬದಲಾಗಿ ನಿಜವಾಗಲೂ ಅದನ್ನು ಸ್ವಚ್ಛವಾಗಿಟ್ಟುಕೊಂಡು ನಿಜಾರ್ಥದಲ್ಲಿ ಪೂಜ್ಯ ಭಾವನೆಯಿಂದ ನೋಡಿಕೊಳ್ಳಬೇಕು ಎಂದು ನಟ ಅನಿರುದ್ ಜತ್ಕರ್ #AnirudhJatkar ಹೇಳಿದರು.
ತಮ್ಮ ನಟನೆಯ ಚೆಫ್ ಚಿದಂಬರ #ChefChidambara ಚಿತ್ರದ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ್ದ ಅವರು, ನಗರ ವ್ಯಾಪ್ತಿಯ ತುಂಗಾ ನದಿ ತಟಕ್ಕೆ ತೆರಳಿ, ಹೊಳೆ ಕಲ್ಮಷಗೊಂಡಿರುವುದನ್ನು ಕಂಡು ತೀವ್ರ ಅಸಮಾಧಾನ ಹಾಗೂ ಕಳಕಳಿ ವ್ಯಕ್ತಪಡಿಸಿದರು.
ಗಂಗಾ ಸ್ನಾನ, ತುಂಗಾ ಪಾನ ಎನ್ನುತ್ತಾರೆ. ಆದರೆ, ನಮ್ಮ ತುಂಗಾ ನದಿಯಲ್ಲಿ #TungaRiver ನಗರ ವ್ಯಾಪ್ತಿಯಲ್ಲೇ ಇಷ್ಟು ಗಿಡಗಂಟೆಗಳು ಬೆಳೆದುಕೊಂಡಿವೆ. ಅಲ್ಲದೇ, ಗಲೀಜು ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಇದೇ ತುಂಗಾ ನದಿಯ ನೀರು ಹೊಸಪೇಟೆ, ಹರಿಹರ ಹಾಗೂ ಮಂತ್ರಾಲಯಕ್ಕೆ ಹೋಗುತ್ತದೆ. ಇಂತಹ ಕಲ್ಮಷಗೊಂಡ ನೀರನ್ನು ಬಳಸುವುದು ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ತಡೆಗೋಡೆಗೆ 103 ಕೋಟಿ ರೂ. ವ್ಯಯಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳ ಬಳಿ ಕೇಳಿ ಪಡೆದುಕೊಂಡೆ. ಈ ಗೋಡೆಗೆ ಇಷ್ಟು ದೊಡ್ಡ ಮೊತ್ತ ವ್ಯಯ ಮಾಡುವ ಅವಶ್ಯಕತೆಯಿತ್ತೇ ಎಂದು ಪ್ರಶ್ನಿಸಿದ ಅವರು, ಇದರ ಬದಲಾಗಿ ನದಿಯ ಹಲವು ಕಡೆಗಳಲ್ಲಿ ಮೆಟ್ಟಿಲು ಮಾಡಿದ್ದರೆ ಸಾರ್ವಜನಿಕರು ನದಿಗೆ ಬರಬಹುದಾಗಿತ್ತು ಎಂದರು.
ಪ್ರಮುಖವಾಗಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಗಿಡಗಂಟೆಗಳು ಬೆಳೆದು ಅಸ್ವಚ್ಛಗೊಂಡಿದೆ. ಇದು ಸ್ವಚ್ಛವಾಗಿದ್ದರೆ ಮಳೆ ನೀರು #RainWater ಇಲ್ಲಿ ಸಂಗ್ರಹವಾಗುತ್ತದೆ. ಇಲ್ಲದೇ ಹೋದರೆ ಮಳೆ ನೀರು ಸರಿಯಾದ ರೀತಿಯಲ್ಲಿ ನದಿಯಲ್ಲಿ ಹರಿಯುವುದಿಲ್ಲ ಎಂದರು.
ನಮ್ಮ ನದಿಯನ್ನು ಕೇವಲ ಹೆಸರಿನಲ್ಲಿ ಪೂಜಿಸುವುದಲ್ಲ. ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ನಿಜಾರ್ಥದಲ್ಲಿ ಪೂಜಿಸಬೇಕು. ತುಂಗೆ ನಮ್ಮ ತಾಯಿ. ಇಂತಹ ನದಿಯನ್ನು #River ನಾವೆಲ್ಲರೂ ಕೈಜೋಡಿಸಿ ಸ್ವಚ್ಛಗೊಳಿಸೋಣ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ತತಕ್ಷಣ ಗಮನ ಹರಿಸಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post