ಶಿವಮೊಗ್ಗ: ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಎಸ್. ಭಾರದ್ವಾಜ್‌ರವರ ನಿರ್ದೇಶನ ಸೀಸೆ ಪ್ರಥಮ ಬಹುಮಾನದೊಂದಿಗೆ ಹತ್ತು ಸಾವಿರ ರೂಪಾಯಿಗಳ ನಗದು ಪುರಸ್ಕಾರಕ್ಕೆ ಪಾತ್ರವಾಗಿದೆ.
ರೋಟರಿ ಕ್ಲಬ್ ಜಿಲ್ಲೆ 3182 ಹಾಗೂ ರೋಟರಿ ವಲಯ 10 ಮತ್ತು 11ರ ಎಲ್ಲ ಕ್ಲಬ್‌ಗಳು, ಶಿವಮೊಗ್ಗ ಬೆಳ್ಳಿಮಂಡಲ, ಅಂಬೆಗಾಲು ಕಿರುಚಿತ್ರ ಸ್ಪರ್ಧೆ, ಸಿನಿಮೊಗೆ – ಶಿವಮೊಗ್ಗ ಚಿತ್ರ ಸಮಾಜಗಳ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿತ್ತು.
ವಿಕಾಸ್ ಚಕ್ರವರ್ತಿಯವರ ನಿರ್ದೇಶನದ ಜಾಗೃತ ದ್ವಿತೀಯ ಬಹುಮಾನದೊಂದಿಗೆ ಏಳು ಸಾವಿರದ ಐನೂರು ರೂ.ಗಳ ನಗದು ಹಾಗೂ ಶರತ್‌ಚಂದ್ರರವರ ನಿರ್ದೇಶನದ ಯೋಚಿಸಿ ಕಿರುಚಿತ್ರ ತೃತೀಯ ಬಹುಮಾನದೊಂದಿಗೆ ಐದು ಸಾವಿರ ರೂಪಾಯಿಗಳ ನಗದು ಪುರಸ್ಕಾರ ಗಳಿಸಿದೆ.
ಪ್ರಸನ್ನರವರ ನಿರ್ದೇಶನದ ಸ್ಪೂರ್ತಿ, ಹರ್ಷರವರ ನಿರ್ದೇಶನದ ಪಾಲಿಸಿ ಚಿತ್ರಗಳು ಸಮಾಧಾನಕರ ಬಹುಮಾನದ ಜೊತೆಗೆ ತಲಾ ಎರಡು ಸಾವಿರ ರೂಪಾಯಿಗಳ ನಗದು ಪುರಸ್ಕಾರಕ್ಕೆ ಪಾತ್ರವಾಗಿವೆ.
ಕಂಟ್ರಿ ಕ್ಲಬ್ ಆವರಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ, ಈ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದ ರೋಟರಿ ಜಿಲ್ಲಾ ರಾಜ್ಯಪಾಲ ಅಭಿನಂದನ್ ಎ. ಶೆಟ್ಟಿ, ಸಾರ್ವಜನಿಕರಲ್ಲಿ ಅದರಲ್ಲಿಯೂ ವಿಶೇಷವಾಗಿ ಇಂದಿನ ಯುವ ಸಮೂಹದಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಕ್ರಿಯಾಶೀಲ ಯುವಕರು ಕಿರುಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವುದು ಗಮನಾರ್ಹ ಎಂದರು.
ಈ ಕಿರುಚಿತ್ರಗಳನ್ನು, ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಚಲನಚಿತ್ರ ಮಂದಿರಗಳು, ಮಾಲ್‌ಗಳಲ್ಲಿ ಪ್ರದರ್ಶಿಸುವುದರ ಮೂಲಕ, ಸಮಾಜದಲ್ಲಿ ಅರಿವು ಮೂಡಿಸುವುದರ ಜೊತೆಗೆ ಕಿರುಚಿತ್ರಗಳ ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಪ್ರೋತ್ಸಾಹಿಸಲಾಗುವುದು ಎಂದ ಅವರು, ಶಿವಮೊಗ್ಗೆಯ ಎಲ್ಲ ರೋಟರಿ ಕ್ಲಬ್‌ಗಳು ಹಾಗೂ ಸಹಭಾಗಿತ್ವದ ಸಂಘಟನೆಗಳು ಈ ಯೋಜನೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದೆ ಎಂದು ಪ್ರಶಂಸಿಸಿದರು.
ಶಿವಮೊಗ್ಗ ಬೆಳ್ಳಿಮಂಡಲದ ಕಾರ್ಯಾಧ್ಯಕ್ಷ ಡಿ.ಎಸ್. ಅರುಣ್ ಮಾತನಾಡಿ, ಶಿವಮೊಗ್ಗ ಬೆಳ್ಳಿಮಂಡಲವು ಅಂಬೆಗಾಲು ಹೆಸರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಿರುಚಿತ್ರ ಸ್ಪರ್ಧೆಯನ್ನು ಅತ್ಯಂತ ಸಂಘಟನಾತ್ಮಕವಾಗಿ ನಡೆಸುತ್ತಿದ್ದು, ಗಣನೀಯ ಸಂಖ್ಯೆಯಲ್ಲಿ ಯುವಕ ಯುವತಿಯರು ಪಾಲ್ಗೊಳ್ಳುತ್ತಿದ್ದಾರೆ. ಪ್ರತೀ ವರ್ಷ ಇದನ್ನು ಒಂದು ಹಬ್ಬದ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿಯ ಪ್ರಮುಖರಾದ ಡಿ. ಎನ್. ರಮೇಶ್, ಗಣೇಶ್ ಭಟ್, ಜಿ.ಎನ್. ಪ್ರಕಾಶ್, ರಾಜಾರಾಮ್ ಭಟ್, ಎಂ. ಜಿ. ರಾಮಚಂದ್ರ ಮೂರ್ತಿ, ಧನರಾಜ್, ವೀರಣ್ಣ ಹುಗ್ಗಿ, ಕೆಪಿಎಸ್ ಸ್ವಾಮಿ ಹಾಗೂ ರೋಟರಿ ಜಿಲ್ಲಾ ವ್ಯಾಪ್ತಿಯ 14 ರೋಟರಿಗಳ ಅಧ್ಯಕ್ಷರು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಜಿ. ವಿಜಯಕುಮಾರ್‌ರವರು ನಿರೂಪಿಸಿ, ರವೀಂದ್ರ ನಾಥ ಐತಾಳ್ ಸ್ವಾಗತಿಸಿದರು. ಯೋಜನಾ ನಿರ್ದೇಶಕ ವಸಂತ ಹೋಬಳಿದಾರ್‌ರಿಂದ ಪ್ರಾಸ್ತಾವಿಕ, ತೀರ್ಪುಗಾರರ ಪರವಾಗಿ ವೈದ್ಯರವರಿಂದ ಕಿರುಚಿತ್ರಗಳ ವಿಶ್ಲೇಷಣೆ ಹಾಗೂ ಕೆಪಿಎಸ್ ಸ್ವಾಮಿ ಅವರಿಂದ ವಂದನಾರ್ಪಣೆ ನಡೆಯಿತು.
ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಕಿರು ಚಿತ್ರಗಳ ಪ್ರದರ್ಶನ ನಡೆದು ಗಮನ ಸೆಳೆಯಿತು.
(ವರದಿ: ಡಾ.ಸುಧೀಂದ್ರ)
Discussion about this post