ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಿವೃತ್ತ ರಾಜ್ಯಪಾಲರು, ಹಿರಿಯ ಕಾನೂನು ತಜ್ಞ ಹಾಗೂ ರಾಜ್ಯಸಭಾ ಸದಸ್ಯರೂ ಆಗಿದ್ದ ನ್ಯಾಯಮೂರ್ತಿ ಎಂ. ರಾಮ ಜೋಯಿಸ್ ನಿಧನ ಅತೀವ ನೋವು ತಂದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಂ. ರಾಮ ಜೋಯಿಸ್ ಅವರು ನ್ಯಾಯವಾದಿಗಳಾಗಿದ್ದರಲ್ಲದೇ, ಜಾರ್ಖಂಡ್ ಹಾಗೂ ಬಿಹಾರದ ರಾಜ್ಯಪಾಲರಾಗಿ, ರಾಜ್ಯಸಭಾ ಸದಸ್ಯರಾಗಿ, ಪಂಜಾಬ್ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ದೇಶದ ಕಾನೂನು ವ್ಯವಸ್ಥೆ, ಸಂವಿಧಾನದ ಕುರಿತು ಬೆಳಕು ಚೆಲ್ಲುವ ಅವರ ಪ್ರಯತ್ನ ಅವಿಸ್ಮರಣೀಯವಾದುದು ಎಂದು ಸಂಸದರು ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರೊಂದಿಗೆ ಸೆರೆಮನೆ ವಾಸವನ್ನೂ ಅನುಭವಿಸಿದ್ದಲ್ಲದೇ, ವಾಜಪೇಯಿ, ಅಡ್ವಾಣಿ ರವರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿದ್ದರು. ರಾಷ್ಟ್ರೀಯತೆ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದ ರಾಮ ಜೋಯಿಸರು ತಾವು ಏರಿದ ಎತ್ತರದ ಜಾಗದಲ್ಲೂ ತಮ್ಮ ಸಿದ್ದಾಂತ ತಾವು ನಂಬಿರುವ ವಿಚಾರಗಳಿಗಳಿಗೆ ಎಂದೂ ಮಹತ್ವ ಕಡಿಮೆಯಾಗದಂತೆ ನೋಡಿಕೊಂಡವರು ಎಂದು ತಿಳಿಸಿದ್ದಾರೆ.
ನಮ್ಮ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿ ಜನಿಸಿದ್ದ ಮಂಡಗದ್ದೆ ರಾಮಾ ಜೋಯಿಸರು ನಮ್ಮ ಜಿಲ್ಲೆಯ ಕೀರ್ತಿಯನ್ನು ದೇಶದ ಉತ್ತುಂಗ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು ಹೆಮ್ಮೆಯ ಸಂಗತಿ ಎಂದಿದ್ದಾರೆ.
ಇಂತಹ ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದ ರಾಮ ಜೋಯಿಸ್ ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ಚಿಂತಕರನ್ನು ಮತ್ತು ಭಾರತೀಯ ಜನತಾ ಪಕ್ಷವು ಒಬ್ಬ ಪ್ರಮುಖ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಬಂಧು ವರ್ಗ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post