ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಿಂದ ಜಿಲ್ಲೆಯ ಪ್ರವಾಸೋದ್ಯಮ, ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗವಕಾಶ, ತೋಟಗಾರಿಕೆ ಮತ್ತು ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಸಂಪರ್ಕ ಸೇರಿದಂತೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಇಂದು ನಗರದಲ್ಲಿ ಆಯೋಜಿಸಲಾಗಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ 220ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಶೀಘ್ರವಾಗಿ ಬೆಳೆಯುತ್ತಿರುವ ಆರ್ಥಿಕ ಮತ್ತು ಪ್ರವಾಸೋದ್ಯಮದ ಪ್ರಾಮುಖ್ಯತೆಯನ್ನು ಗಮದಲ್ಲಿರಿಸಿಕೊಂಡು ಜಿಲ್ಲೆಯ ಭರಣಾಪುರ ಹಾಗೂ ಮದಭಾವಿ ಗ್ರಾಮಗಳಲ್ಲಿನ ಸುಮಾರು 727 ಎಕರೆ ಜಮೀನಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಹಾಗೂ ನಿಂಬೆ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಒಣ ದ್ರಾಕ್ಷಿ ಮತ್ತು ನಿಂಬೆ ಹಣ್ಣನ್ನು ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ವಿಮಾನ ನಿಲ್ದಾಣ ಪ್ರಾರಂಭದಿಂದ ಈ ಎಲ್ಲಾ ಚಟುವಟಿಕೆಗಳಿಗೆ ಹೆಚ್ಚಿನ ಮಾರುಕಟ್ಟೆ ಲಭ್ಯವಾಗಲಿದೆ ಎಂದರು.
ವಿಜಯಪುರ ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ಕಾರ್ಯಾಚರಣೆಯನ್ನು ಕೇಂದ್ರಿಯ ನಾಗರೀಕ ವಿಮಾನಯಾನ ಸಚಿವಾಲಯದ ಭಾರತೀಯ ವಿಮಾನಯಾನ ಪ್ರಾಧಿಕಾರದೊಂದಿಗೆ ಉಡಾನ್ ಯೋಜನೆ ಅಡಿ ಸೇರ್ಪಡಿಸಲು ಕ್ರಮವಹಿಸಲಾಗುತ್ತಿದೆ. ಕಾಮಗಾರಿಯನ್ನು ಎಟಿಆರ್-72 ವಿಮಾನಗಳ ಹಾರಾಟಕ್ಕಾಗಿ ನಿರ್ಮಿಸಲಾಗಿದ್ದು, ಮುಂದೆ ಅದನ್ನು ಏರ್‌ಬಸ್-320ಗಳ ಹಾರಾಟಕ್ಕಾಗಿ ವಿಸ್ತರಿಸುವಂತೆ ವಿನ್ಯಾಸಗೊಳಿಸಲಾಗಿದೆ. ವಿಮಾನ ನಿಲ್ದಾಣವು ಕಾರ್ಯಾಚರಣೆಯನ್ನು ಪ್ರಾರಂಭಿಸುವುದರಿಂದ, ಜನಸಾಮಾನ್ಯರು ಸಹ ವಿಮಾನಯಾನವನ್ನು ಕೈಗೊಳ್ಳಬಹುದಾಗಿದೆ ಎಂದು ಹೇಳಿದರು.
ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಗಳು ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಅದೇ ರೀತಿ ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಸಹ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಶಾಸಕ ಅರಗ ಜ್ಞಾನೇಂದ್ರ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯಪುರದಲ್ಲಿ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ಶಾಸಕ ದೇವಾನಂದ ಚೌವ್ಹಾಣ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post