ಶಿವಮೊಗ್ಗ: ಮೂಢನಂಬಿಕೆಗಳ ಬಗ್ಗೆ ಸ್ತ್ರೀಯರು ಜಾಗೃತರಾಗಿರಬೇಕೆಂದು ಮಾನಸ ನರ್ಸಿಂಗ್ ಹೋಂನ ವೈದ್ಯೆ ಡಾ. ಸಾಯಿಕೋಮಲ್ ಕರೆ ನೀಡಿದರು.
ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಕೋಟೆ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಪುರುಷನಿಗೆ ಸಮನಾಗಿ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದಾಳೆ. ಆದರೆ, ಇನ್ನೂ ಮೂಢನಂಬಿಕೆಗಳು ಮಹಿಳೆಯನ್ನು ಕಟ್ಟಿಹಾಕುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂತಹ ಮೂಢನಂಬಿಕೆಗಳ ಬಗ್ಗೆ ಮಹಿಳೆಯರು ಜಾಗೃತರಾಗಿರಬೇಕು. ಮಾನಸಿಕ ಒತ್ತಡಗಳಿಂದ ಖಿನ್ನತೆಗೊಳಗಾಗಿದ್ದರೆ ಅದನ್ನು ದೆವ್ವ ಹಿಡಿದಿದೆ ಎಂದು ಬಿಂಬಿಸಲಾಗುತ್ತದೆ ಇಂತಹ ಮೂಢನಂಬಿಕೆಗಳಿಂದ ಮಹಿಳೆಯರು ಹೊರಬರಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ವಿದ್ವಾನ್ ಸಿಂಧು ಸಬಾಸ್ಟಿಯನ್ ತಮ್ಮ ಗಾಯನದ ಮೂಲಕ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಹೇಗೆ ಬರಬೇಕು. ಇಂತಹ ಸಂದರ್ಭದಲ್ಲಿ ಅವರಿಗೆ ಎದುರಾಗುವ ಸಮಸ್ಯೆಗಳೇನು, ಪರಿಹಾರವೇನು ಎಂದು ತಿಳಿಸಿಕೊಟ್ಟರು.
ಎನ್.ಎಸ್.ಯು.ಐ. ನಗರಾಧ್ಯಕ್ಷ ವಿಜಯ್ ಮಾತನಾಡಿ, ಹೆಣ್ಣುಮಕ್ಕಳು ಸಬಲರಾಗಬೇಕೆಂದು ಕರೆ ನೀಡಿದರಲ್ಲದೆ, ಈ ನಿಟ್ಟಿನಲ್ಲಿ ಎನ್.ಎಸ್.ಯು.ಐ.ನಿಂದ ಸಿಗಬಹುದಾದ ಸಹಕಾರದ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು.
ಎನ್.ಎಸ್.ಯು.ಐ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೌಗಂಧಿಕಾ ಮಾತನಾಡಿ, ಹೆಣ್ಣು ಅಬಲೆಯಲ್ಲ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗಿಂತ ಮುಂದಿದ್ದಾರೆ. ಹಾಗಾಗಿ ಹೆಣ್ಣುಮಕ್ಕಳಲ್ಲಿ ಕೀಳರಿಮೆ ಬೇಡ. ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ಯಾವುದೇ ಪುರುಷನಿಗಿಂತ ಕಡಿಮೆಯಿಲ್ಲದಂತೆ ಆಡಳಿತ ನಡೆಸಿದರು. ಇಂತಹವರು ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದು ಸೋದಾಹರಣವಾಗಿ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಎಚ್.ಎಸ್. ಬಾಲಾಜಿ ಮಾತನಾಡಿ, ಮಹಿಳೆಯರು ರಾಜಕೀಯವಾಗಿ ಬೆಳೆಯಬೇಕು. ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚು ಮೀಸಲಾತಿ ನೀಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಸಂಖ್ಯೆಯ ಹೆಚ್ಚಾಗಿದೆ. ವಿದ್ಯಾರ್ಥಿನಿಯರು ವಿದ್ಯಾರ್ಥಿ ಕಾಂಗ್ರೆಸ್‌ನಂತಹ ಸಂಘಟನೆಗಳಲ್ಲಿ ತೊಡಗುವ ಮೂಲಕ ರಾಜಕೀಯ ಶಿಕ್ಷಣವನ್ನೂ ಪಡೆಯಬಹುದೆಂದರಲ್ಲದೆ, ಎನ್.ಎಸ್.ಯು.ಐ.ನ ಆನ್‌ಲೈನ್ ಸದಸ್ಯತ್ವ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ವಸತಿ ನಿಯಲಯದ ವಾರ್ಡನ್ ವನಜಾಕ್ಷಿ ಉಪಸ್ಥಿತರಿದ್ದರು.
(ವರದಿ: ಡಾ.ಸುಧೀಂದ್ರ)
Discussion about this post