ಶಿವಮೊಗ್ಗ: ದೇಶದಾದ್ಯಂತ ಮೂರನೆಯ ಹಂತದ ಚುನಾವಣೆ ಇಂದು ಯಶಸ್ವಿಯಾಗಿ ನಡೆದಿದ್ದು, ಶಿವಮೊಗ್ಗವೂ ಸಹ ದಾಖಲೆ ಮತದಾನಕ್ಕೆ ಸಾಕ್ಷಿಯಾಗಿದೆ. ಇಂತಹ ಮತದಾನದಲ್ಲಿ ಕತಾರ್’ನಿಂದ ಆಗಮಿಸಿದ ನಗರದ ಯುವತಿಯೊಬ್ಬರು ಮತ ಚಲಾವಣೆ ಮಾಡಿ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ನಗರದ ಡಾ. ರವಿ ಪೈ ಹಾಗೂ ಕಿರಣ್ ಪೈ ದಂಪತಿ ಪುತ್ರಿ ನಿವೇದಿತಾ ಪೈ ಅವರು ಕತಾರ್’ನ ದೋಹಾದಲ್ಲಿ ನೆಲೆಸಿದ್ದಾರೆ. ಇಂದು ತಮ್ಮ ಮತ ಚಲಾವಣೆ ಮಾಡುವ ಉದ್ದೇಶದಿಂದ ಕತಾರ್’ನಿಂದ ನಗರಕ್ಕೆ ಆಗಮಿಸಿ ತಮ್ಮ ಪೋಷಕರೊಂದಿಗೆ ಮತಗಟ್ಟೆ ಸಂಖ್ಯೆ 190ರಲ್ಲಿ ಮತ ಚಲಾವಣೆ ಮಾಡಿದ್ದಾರೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ನಿವೇದಿತಾ, 60 ವರ್ಷಗಳಲ್ಲಿ ಕಾಣದ ಅಭಿವೃದ್ಧಿಯ ಹಾದಿಯನ್ನು ದೇಶ ಕಳೆದ ಐದು ವರ್ಷದಲ್ಲಿ ಕಾಣುತ್ತಿದೆ. 2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ ಅವರ ಆಡಳಿತ ದೇಶವನ್ನು ಸುಭದ್ರಗೊಳಿಸುವ ಜೊತೆಯಲ್ಲಿ ಭಾರತವನ್ನು ವಿಶ್ವಗುರುವಾಗಿಸುವತ್ತ ಕೊಂಡೊಯ್ಯುತ್ತಿದೆ ಎಂದರು.
ಐದು ವರ್ಷದಿಂದ ವಿಶ್ವದ ಗಮನ ಸೆಳೆಯುತ್ತಿರುವ ಭಾರತದ ಅಭಿವೃದ್ಧಿಗೆ ವಿಶ್ವಸಂಸ್ಥೆ, ಐಎಂಎಫ್ ಸೇರಿದಂತೆ ಜಾಗತಿಕ ಮಟ್ಟದ ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸಿರುವುದೇ ಸಾಕ್ಷಿಯಾಗಿದೆ ಎನ್ನುತ್ತಾರೆ ನಿವೇದಿತಾ.
ನೋಟು ಅಮಾನ್ಯೀಕರಣದಂತಹ ನಿರ್ಧಾರದಿಂದ ಕೆಲ ಕಾಲ ಜನರಿಗೆ ತೊಂದರೆಯಾಗಿದ್ದರೂ, ದೇಶದ ಅಭಿವೃದ್ಧಿಯ ದೃಷ್ಠಿಯಿಂದ ಇಂತಹ ಸಾಹಸಕ್ಕೆ ಕೈಹಾಕಿದ ಪ್ರಧಾನಿ ಮೋದಿ, ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಶತ್ರು ರಾಷ್ಟ್ರ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡುವ ಜೊತೆಯಲ್ಲೇ ಭಾರತದ ತಾಕತ್ತು ಎಂತಹುದ್ದು ಎಂಬುದನ್ನು ವಿಶ್ವಕ್ಕೇ ತೋರಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.
ಇಂತಹ ಅಭಿವೃದ್ಧಿಯ ಪಥದ ರಥ ಗುರಿಯನ್ನು ಮುಟ್ಟಬೇಕು ಎಂದರೆ ಕೇವಲ ಐದು ವರ್ಷ ಸಾಲುವುದಿಲ್ಲ. ಇದಕ್ಕಾಗಿ ಇನ್ನೊಂದು ಅವಧಿ ಮೋದಿಯವರಿಗೆ ಬೇಕಿದೆ. ಇಂತಹ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಮತವೂ ಸಹ ಮಹತ್ವವನ್ನು ಪಡೆದುಕೊಳ್ಳುತ್ತದೆ. ಹೀಗಾಗಿ, ನನ್ನ ಮತ ಚಲಾವಣೆ ಮೂಲಕ ದೇಶದ ಅಭಿವೃದ್ಧಿಯನ್ನು ಬೆಂಬಲಿಸಬೇಕು ಎಂಬ ಒಂದೇ ಉದ್ದೇಶದಿಂದ ನನ್ನ ನಗರಕ್ಕೆ ಆಗಮಿಸಿ, ನನ್ನ ಹಕ್ಕನ್ನು ಚಲಾಯಿಸಿದ್ದೇನೆ ಎನ್ನುತ್ತಾರೆ.
ಒಂದು ಮತ ಚಲಾವಣೆಗಾಗಿ ಕತಾರ್’ನಿಂದ ಆಗಮಿಸಿ, ಪ್ರಜಾಪ್ರಭುತ್ವದ ಸೌಂದರ್ಯವನ್ನು ಇಮ್ಮಡಿಗೊಳಿಸಿದ ಇವರ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
(ವರದಿ: ಡಾ.ಸುಧೀಂದ್ರ, ಶಿವಮೊಗ್ಗ)








Discussion about this post