ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದುಳಿದ ವರ್ಗಗಳ ಕಲ್ಯಾಣ ಕಾಮಗಾರಿಗಳಿಗಾಗಿ ಮೀಸಲಿಟ್ಟ 312 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು #CM Siddaramaiah ವಾಪಾಸ್ಸು ತೆಗೆದುಕೊಂಡು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಇಂದು ಗಂಭೀರ ಆರೋಪ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತ ಇದೆ. ಈ ಹಿಂದೆ ದಲಿತರಿಗಾಗಿ ಮೀಸಲಿಟ್ಟ ಹಣವನ್ನು ಸರ್ಕಾರ ವಾಪಾಸ್ಸು ತೆಗೆದುಕೊಂಡಿತ್ತು. ಇದೀಗ ಮತ್ತೆ ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗಾಗಿ ವಿವಿಧ ಸಂಘ ಸಂಸ್ಥೆಗಳು ನಿರ್ವಹಿಸಿದ್ದ ಕಾಮಗಾರಿಗಳಿಗೆ ಹಣವನ್ನು ಬಿಡುಗಡೆ ಮಾಡದೇ ಮತ್ತು ಅದಕ್ಕಾಗಿ ಮೀಸಲಿಟ್ಟಿದ್ದ ಸುಮಾರು ೩೧೨ ಕೋಟಿ ರೂ.ಗಳನ್ನು ಹಿಂತೆಗೆದುಕೊಂಡಿದೆ. ಇದು ಘೋರ ಅನ್ಯಾಯವಾಗಿದ್ದು, ತಕ್ಷಣವೇ ಈ ಹಣವನ್ನು ವಾಪಾಸ್ಸು ನೀಡಬೇಕು ಎಂದರು.
ಒಂದು ಕಡೆ ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪನವರು ಹಣವನ್ನು ವಾಪಾಸ್ಸು ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಮುಖ್ಯಮಂತ್ರಿಗಳು ಈಗಾಗಲೇ ಆದೇಶ ಮಾಡಿದ್ದಾರೆ. ಸಚಿವ ಮಹಾದೇವಪ್ಪನವರ ಹೇಳಿಕೆ ರಾಜಕೀಯ ಹೇಳಿಕೆಯಾಗಿದೆ. ಇಂತಹ ರಾಜಕೀಯ ಹೇಳಿಕೆಯನ್ನು ನೀಡಬಾರದು. ಮತ್ತು ತಕ್ಷಣವೇ ಹಣ ವಾಪಾಸ್ಸಾಗಬೇಕು, ಗ್ಯಾರಂಟಿಗಳಿಗೆ ಬಳಸಿದ್ದಾರೋ, ಬಿಟ್ಟಿದ್ದಾರೋ ಅದು ಬೇರೆ ಪ್ರಶ್ನೆ ಆದರೆ ಪರಿಶಿಷ್ಟ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಮಾಡುತ್ತೇವೆ ಎಂದು ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂತಹ ದ್ರೋಹ ಮಾಡಬಾರದಾಗಿತ್ತು ಎಂದರು.
ಆಶ್ರಯ ಮನೆಯ ಹೋರಾಟ ಮುಂದುವರೆದಿದೆ. ಈ ಹಿಂದೆ ವಸತಿ ಸಚಿವ ಜಮೀರ್ ಅಹಮ್ಮದ್ ಅವರು ನಮ್ಮನ್ನು ಬರ ಹೇಳಿದ್ದರು. ಅವರೇ ಸಮಯ ನೀಡಿದ್ದರು, ಶಿವಮೊಗ್ಗದ ಆಶ್ರಯ ಬಡಾವಣೆಯ ವಿಷಯಕ್ಕೆ ಸಂಬಂಧಿಸಿದಂತೆ ಬಡವರಿಗೆ ಮನೆಕೊಡಲು ಈ ಹಿಂದೆಯೇ ಅವರಿಗೆ ಆಗ್ರಹಿಸಿದ್ದೇವು. ಅಲ್ಲಿಗೆ ಹೋದರೆ ಅವರು ವಿದೇಶಿ ಯಾತ್ರೆಗೆ ಹೋಗಿದ್ದರು. ನಮ್ಮನ್ನು ಬರ ಹೇಳಿ ಹೀಗೆ ಹೋಗಿದ್ದು ನಮಗೆ ಬೇಸರ ತರಸಿದೆ. ಈಗಲಾದರೂ ಅವರು ಶಿವಮೊಗ್ಗಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿ ಆಶ್ರಯ ಮನೆಗಳನ್ನು ನೀಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟಸ್ವರೂಪವೇ ಬೇರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿದ್ದೆವು. ಅವರು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡು ಕಾರ್ಮಿಕರ ಕಷ್ಟಗಳನ್ನು ಆಲಿಸಿದ್ದಾರೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ನಿಲ್ಲಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಯೇ ಸುಮಾರು 10,693 ವಿದ್ಯಾರ್ಥಿಗಳಿದ್ದಾರೆ. ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರಬಹುದು. ಜೊತೆಗೆ ಕಟ್ಟಡ ಕಾರ್ಮಿಕರ ಇತರೆ ಸಮಸ್ಯೆಗಳನ್ನು ಕೂಡ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಅವರು ಒಪ್ಪಿದ್ದಾರೆ ಕೂಡ ಅವರಿಗೆ ಅಭಿನಂದನೆಗಳು ಎಂದರು.
Also read: ದೆಹಲಿ | ಕೋಚಿಂಗ್ ಸೆಂಟರ್’ನಲ್ಲಿ ಯುಪಿಎಸ್’ಪಿ ಆಕಾಂಕ್ಷಿಗಳ ಸಾವು | ಐವರ ಬಂಧನ
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿಗಳೇ ನಿಂತು ಹೋಗಿವೆ, ರೈತರ ಬೆಳೆ ನಾಶವಾಗಿವೆ, ಪ್ರಕೃತಿ ವಿಕೋಪಗಳಗಿವೆ, ಪರಿಹಾರದ ಭರವಸೆಗಳು ಇಲ್ಲ, ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ, ಹೊಸ ಕಾಮಗಾರಿಗಳು ಮೊದಲೇ ಇಲ್ಲ, ಇದರ ಜೊತೆಗೆ ರಾಶಿರಾಶಿ ಹಗರಣಗಳು ಸರ್ಕಾರವನ್ನು ಸುತ್ತಿಕೊಂಡಿವೆ, ಸರ್ಕಾರ ಜೀವಂತವಾಗಿಲ್ಲ ಎಂದು ಆರೋಪಿಸಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ, ಮೂಡ ಹಗರಣ, ಅಪೇಕ್ಸ್ ಬ್ಯಾಂಕ್ ಹಗರಣ, ಭೋವಿ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತರ ನಿಗಮದ ಹಗರಣ ಹೀಗೆ ಹಗರಣಗಳು ಸಾಲು ಸಾಲಾಗಿವೆ. ಮುಖ್ಯಮಂತ್ರಿಗಳು ಉತ್ತರ ಕೊಡಲು ಶಕ್ತರಾಗಿಲ್ಲ, ಬಿಜೆಪಿ-ಜೆಡಿಎಸ್ ಸರ್ಕಾರದಲ್ಲೂ ಹಗರಣಗಳಾಗಿವೆ ಎಂದು ಹೇಳುತ್ತಾರೆ. ಯಾರ ಕಾಲದಲ್ಲಾದರೂ ಹಗರಣಗಳಾಗಿರಲಿ, ಬಿಜೆಪಿ ಯವರೇ ತಪ್ಪೇ ಮಾಡಿರಲಿ ಈ ಎಲ್ಲಾ ಹಗರಣಗಳನ್ನು ಸಿಬಿಐಗೆ ವಹಿಸಲಿ ಯಾರೂ ಕಳ್ಳರಿದ್ದಾರೋ ಅವರು ಜೈಲಿಗೆ ಹೋಗಲೇಬೇಕು. ಅದಕ್ಕೆ ಅಂಜಿಕೆಯಾಕೆ ಯಾವುದನ್ನೂ ಮುಚ್ಚಿಡಬೇಡಿ, ಭಂಡತನ ಮಾಡಬೇಡಿ, ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಪುನರುಚ್ಛರಿಸಿದರು.
ಮುಸ್ಲಿಂರನ್ನು ಓಲೈಸುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಾಮನಗರ ಊರಿನ ಹೆಸರನ್ನು ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಭಾಗಕ್ಕೆ ಸೇರಿಸಲು ಹೊರಟಿದೆ. ರಾಮ ಎಂಬ ಹೆಸರು ಕಂಡರೆ ಇವರಿಗೆ ಅದೇಕೋ ಆಗಿ ಬರುತ್ತಿಲ್ಲ, ಹಿಂದುತ್ವದ ವಿಚಾರ ಬಂದರೆ ಮೈಮೇಲೆ ಬಂದವರಂತೆ ಮಾಡುತ್ತಾರೆ. ಇದು ಸಲ್ಲದು, ರಾಮನಗರವನ್ನು ಅದೇ ಹೆಸರಿನಲ್ಲಿ ಉಳಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಈ.ವಿಶ್ವಾಸ್, ಎಂ.ಶಂಕರ್, ಶಂಕರ್‌ಗನ್ನಿ, ಶ್ರೀಕಾಂತ್, ಜಾಧವ್, ಮೋಹನ್, ರಾಚಯ್ಯ, ಅ.ಮಾ.ಪ್ರಕಾಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post