ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸುಮಾರು 40ಕೋಟಿ ರೂ. ಹಾನಿ ಅಂದಾಜಿಸಲಾಗಿದ್ದು, ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ Minister Narayana Gowda ಅವರು ತಿಳಿಸಿದರು.
ಅವರು ಸೋಮವಾರ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಂದು ವಾರ ಸುರಿದ ಅಕಾಲಿಕ ಮಳೆಯಿಂದಾಗಿ ನಗರ ಪ್ರದೇಶದಲ್ಲಿ ನೀರು ಮನೆಗಳಿಗೆ ನುಗ್ಗಿ ವ್ಯಾಪಕ ಹಾನಿ ಉಂಟಾಗಿದೆ. ಇದೇ ರೀತಿ ಮೆಕ್ಕೆಜೋಳ ಹಾಗೂ ಭತ್ತದ ಬೆಳೆಗಳಿಗೂ ಹಾನಿ ಉಂಟಾಗಿದೆ. ಸುಮಾರು 3ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. 2139ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. 24ಶಾಲೆಗಳು ಹಾಗೂ 17ಅಂಗನವಾಡಿ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಬೆಳೆ ಹಾನಿಗೆ ಪ್ರಸ್ತುತ ಹೆಕ್ಟೇರ್‍ಗೆ 13ರಿಂದ 15ಸಾವಿರ ರೂ. ಪರಿಹಾರ ಒದಗಿಸಲಾಗುತ್ತಿದೆ. ಇದನ್ನು ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
Also read: ಬೇಕು ಎನ್ನಿಸಿದರೆ ಗೋಮಾಂಸ ತಿನ್ನುತ್ತೇನೆ: ಸಿದ್ದರಾಮಯ್ಯ ಹೇಳಿಕೆ
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ MP Raghavendra ಅವರು ಮಾತನಾಡಿ, ಮಳೆಯಿಂದ ಶಿವಮೊಗ್ಗ ನಗರದ 7ವಾರ್ಡ್‍ಗಳಲ್ಲಿ ನೀರು ತುಂಬಿ ಹಾನಿ ಉಂಟಾಗಿದೆ. ಪ್ರತಿ ವರ್ಷ ಮಳೆಯಿಂದ ತೊಂದರೆಗೊಳಗಾಗುವ ಪ್ರದೇಶಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅತಿವೃಷ್ಟಿಯಿಂದ ಶಿಕಾರಿಪುರ ಹಾಗೂ ಸೊರಬ ತಾಲೂಕಿನಲ್ಲಿ ಮೆಕ್ಕೆಜೋಳ ಸುಮಾರು 30ಕ್ವಿಂಟಾಲ್ ಬೆಳೆ ಹಾನಿ ಉಂಟಾಗಿದೆ. ಕೆರೆಕಟ್ಟೆ ಒಡೆದು ಭತ್ತ ಹಾಗೂ ಅಡಿಕೆ ತೋಟಗಳಿಗೂ ವ್ಯಾಪಕ ಹಾನಿ ಉಂಟಾಗಿದ್ದು, ರೈತರಿಗೆ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಶಿವಮೊಗ್ಗ ನಗರದ ಕೋರ್ಟ್ ಮುಂಭಾಗ, ಬಾಪೂಜಿ ನಗರ, ಹೊಳೆಹೊನ್ನೂರು ರಸ್ತೆ, ಬಿ.ಬೀರನಹಳ್ಳಿಯಲ್ಲಿ ಕೆರೆ ಒಡೆದು ಹಾನಿಗೀಡಾಗಿರುವ ರೈತರ ಜಮೀನು, ನ್ಯೂ ಮಂಡ್ಲಿ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕ ಅಶೋಕ ನಾಯ್ಕ್, ಡಿ.ಎಸ್.ಅರುಣ್, ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಸ್ಮಾರ್ಟ್‍ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ಚಿದಾನಂದ ವಟಾರೆ, ಉಪವಿಭಾಗಾಧಿಕಾರಿ ಪ್ರಕಾಶ್ ಮತ್ತಿತರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post