ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಒಟ್ಟು 15 ಸ್ಥಳಗಳಲ್ಲಿ 45 ಎಕರೆ ಪ್ರದೇಶವನ್ನು ಹಸಿರೀಕರಣಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಅವರು ಭಾನುವಾರ ನಗರದ ಕೀರ್ತಿ ನಗರದ ಉದ್ಯಾನದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆರು ತಿಂಗಳ ಅವಧಿಯಲ್ಲಿ 8630 ಸಸಿಗಳನ್ನು ನೆಡುವ ಕಾರ್ಯಕ್ರಮ ಇದಾಗಿದೆ. ಇದಕ್ಕೆ 2.46 ಕೋಟಿ ರೂ. ವೆಚ್ಚವಾಗಲಿದ್ದು, ಸ್ಥಳೀಯ 50 ಬಗೆಯ ಸಸ್ಯ ಪ್ರಭೇದಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 15 ವಿವಿಧ ಜಾತಿಯ ಹಣ್ಣು ಬಿಡುವ ಮರಗಳು, 13 ವಿವಿಧ ಹೂ ಬಿಡುವ ಸಸಿಗಳು, 8 ವಿವಿಧ ಜಾತಿಯ ಫಿಕಸ್ ಸಸಿಗಳನ್ನು ಬೆಳೆಸಲಾಗುತ್ತಿದೆ. ಗುತ್ತಿಗೆದಾರರು ಮೂರು ವರ್ಷಗಳ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳುವ ಶರತ್ತನ್ನು ವಿಧಿಸಲಾಗಿದೆ ಎಂದರು.
ಸಾರ್ವಜನಿಕರ ಸಹಯೋಗದಲ್ಲಿ ಶಿವಮೊಗ್ಗ ನಗರವನ್ನು ಹಸಿರೀಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ನಗರದಲ್ಲಿ ಶುದ್ಧ ಗಾಳಿ, ಉತ್ತಮ ವಾತಾವರಣ ನಿರ್ಮಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಹಸಿರೀಕರಣ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಹಲವು ಭಾಗಗಳಲ್ಲಿ ಸಸಿ ನೆಡುವ ಕಾರ್ಯ ಪೂರ್ಣಗೊಂಡಿದೆ. ಸ್ಮಾರ್ಟ್ ಸಿಟಿ ಯೋಜನೆಯ ಪರಿಕಲ್ಪನೆಗೆ ಪೂರಕವಾಗಿ ಹಸಿರೀಕರಣ ಕಾರ್ಯ ಕೈಗೊಳ್ಳಲಾಗಿದೆ. ಜನರಿಗೆ ವಾಸಯೋಗ್ಯ ಪರಿಸರ, ವಿಪುಲ ಆರ್ಥಿಕ ಅವಕಾಶ ಕಲ್ಪಿಸುವ ಸುಧಾರಿತ ಗುಣಮಟ್ಟದ ನಗರ ಆಡಳಿತ ವ್ಯವಸ್ಥೆ ರೂಪಿಸುವುದು ಯೋಜನೆ ಉದ್ದೇಶ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಸ್ಮಾರ್ಟ್ ಸಿಟಿ ಎಚ್ಡಿ ಚಿದಾನಂದ ವಟಾರೆ, ಪಾಲಿಕೆ ಸದಸ್ಯರಾದ ಚನ್ನಬಸಪ್ಪ, ಆರತಿ ಹಾಮಾಪ್ರಕಾಶ್, ನಾಗರಾಜ ಕಂಕಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post