ಶಿವಮೊಗ್ಗ ನಗರಕ್ಕೆ ಇಂದು ಸಂತೋಷದ ದಿನವಾಗಿದೆ. ಸ್ವಾತಂತ್ರ್ಯದ 75 ರ ಸಂಭ್ರಮದಲ್ಲಿರುವ ನಾವು ಬಾಂಗ್ಲಾ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡ ಟಿ-55 ನಿಷ್ಕ್ರಿಯ ಯುದ್ಧ ಟ್ಯಾಂಕರ್ T-55 Passive Battle Tanker ಅನ್ನು ಇಂದು ನಗರಕ್ಕೆ ತರಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, 2020 ರಲ್ಲಿ ರಕ್ಷಣಾ ಇಲಾಖೆಗೆ ನಿಷ್ಕ್ರಿಯ ಯುದ್ಧ ಟ್ಯಾಂಕರ್ ಅಥವಾ ವಿಮಾನಗಳನ್ನು ನೀಡುವಂತೆ ಮನವಿ ಮಾಡಿದ್ದೆವು. ಈಗ ಅದಕ್ಕೆ ಫಲ ಸಿಕ್ಕಿದೆ. ಸೈನಿಕ ಇಲಾಖೆಯ ಉಪನಿರ್ದೇಶಕ ಹಿರೇಮಠ್ ಅವರು ವಿಶೇಷ ಆಸಕ್ತಿ ವಹಿಸಿದ್ದರು. ಪೂನಾದ ರಕ್ಷಣಾ ಕಾರ್ಯಾಲಯದಿಂದ ಮೂರು ದಿನ ಪ್ರಯಾಣ ಮಾಡಿ ಯುದ್ಧ ಟ್ಯಾಂಕರ್ ನಗರಕ್ಕೆ ಆಗಮಿಸಿದೆ. ಇದು 1971 ರ ಬಾಂಗ್ಲಾ ಯುದ್ಧದ ಗೆಲುವಿಗೆ ಕಾರಣವಾಗಿತ್ತು. ಈಗ ಇಲ್ಲಿ ಸ್ಥಾಪನೆಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
Also read: ಚಂದ್ರನ ಮೇಲ್ಮ್ಮೆಗೆ ಮತ್ತಷ್ಟು ಹತ್ತಿರವಾದ ಚಂದ್ರಯಾನ-3 ನೌಕೆ: ಇಸ್ರೋ ಮಾಹಿತಿ
ಇದನ್ನು ಎಲ್ಲಿ ಸ್ಥಾಪಿಸಬೇಕೆಂದು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಸದ್ಯದಲ್ಲೇ ಇನ್ನೊಂದು ನಿಷ್ಕ್ರಿಯ ವಿಮಾನ ಕೂಡ ಬರಲಿದ್ದು, ಎಂ.ಆರ್.ಎಸ್. ವೃತ್ತ ಅಥವಾ ಫ್ರೀಡಂ ಪಾರ್ಕ್ ಅಥವಾ ಐಬಿ ಸರ್ಕಲ್ ನಲ್ಲಿ ಸ್ಥಾಪಿಸಲು ಯೋಚನೆ ಇದೆ ಎಂದರು.
ಯುವಕರಲ್ಲಿ ಸೈನ್ಯಕ್ಕೆ ಸೇರ್ಪಡೆ ಆಗಬೇಕೆಂಬ ಮನೋಭಾವ ಬೆಳೆಸಲು ಶಿವಮೊಗ್ಗದ ಮುಖ್ಯ ವೃತ್ತದಲ್ಲಿ ಸ್ಥಾಪಿಸಲಾಗುವುದು. ಈ ಟ್ಯಾಂಕರ್ ಗಾಗಿ 2022 ರಲ್ಲಿ ಪಾಲಿಕೆ ಬಜೆಟ್ ನಲ್ಲಿ 25 ಲಕ್ಷ ರೂ. ಅನುದಾನ ತೆಗೆದಿರಿಸಲಾಗಿತ್ತು ಎಂದರು.
ಆಯುಕ್ತ ಮಾಯಣ್ಣಗೌಡ ಮಾತನಾಡಿ, ಭಾರತ ರಕ್ಷಣಾ ಇಲಾಖೆಯಿಂದ ಈ ಟಿ-55 ನಿಷ್ಕ್ರಿಯ ಯುದ್ಧ ಟ್ಯಾಂಕ್ ನಮ್ಮ ಕೋರಿಕೆ ಮೇರೆಗೆ ನೀಡಿದ್ದು, ಆ. 15 ರೊಳಗೆ ಅದನ್ನು ಪಡೆಯಬೇಕೆಂದು ತಿಳಿಸಲಾಗಿತ್ತು. ಹಾಗಾಗಿ ನಾವು ಸಮರೋಪಾದಿಯಲ್ಲಿ ಕ್ರಮ ಕೈಗೊಂಡು ಶಿವಮೊಗ್ಗಕ್ಕೆ ನಗರಕ್ಕೆ ಬರಮಾಡಿಕೊಂಡಿದ್ದೇವೆ. ಒಂದು ವಾರದೊಳಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಎಲ್ಲಿ ಸ್ಥಾಪಿಸಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇವೆ. ಎಂ.ಆರ್.ಎಸ್. ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುಲಿರುವುದರಿಂದ ಸದ್ಯಕ್ಕೆ ಭದ್ರತೆ ದೃಷ್ಠಿಯಿಂದ ಎಂ.ಆರ್.ಎಸ್. ವೃತ್ತದ ಬಳಿ ಇರುವ ಜಾಗದಲ್ಲಿ ಸೂಕ್ತ ಭದ್ರತೆಯೊಂದಿಗೆ ಅದನ್ನು ಇರಿಸಿದ್ದೇವೆ. ಅದಕ್ಕೆ ಸೂಕ್ತ ಕಟ್ಟೆ ನಿರ್ಮಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುವುದು. ಅದರ ಬಗ್ಗೆ ಕೂಲಂಕಷ ಮಾಹಿತಿ ಕೂಡ ಕೆತ್ತನೆ ಮಾಡಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















