ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂ ವಿರೋಧಿ ಶಕ್ತಿಗೆ ರಾಜ್ಯ ಸರ್ಕಾರ ಪರೋಕ್ಷವಾಗಿ ಶಕ್ತಿ ತುಂಬಿ ಹಿಂದೂಗಳ ಶ್ರದ್ಧಾಕೇಂದ್ರಕ್ಕೆ ಕಪ್ಪು ಚುಕ್ಕೆ ಇಟ್ಟಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ #B Y Raghavendra ಹೇಳಿದ್ದಾರೆ.
ಅವರು ಇಂದು ನಗರದ ಶೀನಪ್ಪಶೆಟ್ಟಿ ವೃತ್ತದಲ್ಲಿ ಬಿಜೆಪಿ ಶಿವಮೊಗ್ಗ ನಗರ ವತಿಯಿಂದ ಕೋಟ್ಯಂತರ ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ #Dharmasthala ಮಂಜುನಾಥಸ್ವಾಮಿ ಸನ್ನಿಧಿಗೆ ಕಳಂಕ ತರಲು ಒಳಸಂಚು ನಡೆಸಿರುವವರ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಸ್ಐಟಿ ತನ್ನ ಜವಾಬ್ದಾರಿ ಮರೆತು ಮೂಲ ವಿಚಾರ ಚರ್ಚೆ ಮಾಡದೇ ದೂರುದಾರ ಯಾರು? ಅವನ ಹಿನ್ನೆಲೆ ಏನು? ಪೂರ್ವಾಪರ ವಿಚಾರಿಸದೇ ಅವನು ತೋರಿಸಿದ ಕಡೆಯಲ್ಲೆಲ್ಲಾ ಗುಂಡಿ ತೋಡುವ ಕೆಲಸ ಮಾಡಿತು. ಹಿಂದೂಗಳ ಶ್ರದ್ಧಾಕೇಂದ್ರಕ್ಕೆ ಅಪಮಾನ ಮಾಡಿತು. ಮೊದಲು ತಿರುಪತಿ, ನಂತರ ಅಯೋಧ್ಯೆ, ಬಳಿಕ ಅಯ್ಯಪ್ಪಸ್ವಾಮಿ ಈಗ ಧರ್ಮಸ್ಥಳ ಬಗ್ಗೆ ನಿರಂತರ ಅಪಪ್ರಚಾರ ಮಾಡುವ ಕೆಲಸವನ್ನು ಕೆಲವು ಅನ್ಯಧರ್ಮೀಯರು ಮತ್ತು ಎಡಪಂಥೀಯರು ಮಾಡುತ್ತಿದ್ದು, ಸರ್ಕಾರ ಇದಕ್ಕೆ ಬೆಂಬಲ ನೀಡಿತು ಎಂದು ಆರೋಪಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಮಾತನಾಡಿ, ಈ ದೇಶದಲ್ಲಿ ಹಲವಾರು ವರ್ಷಗಳಿಂದ ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ದೌರ್ಜನ್ಯ ಮತ್ತು ಅಪಚಾರಗಳು ನಡೆಯುತ್ತಾ ಬಂದಿವೆ. ಧರ್ಮಸ್ಥಳ ಕೂಡ ಅದರ ಒಂದು ಭಾಗ ಎಂದರು.
ನೂರಾರು ಹೆಣ ದಫನ್ ಮಾಡಿದ್ದೇನೆ ಎಂದು ಹೇಳಿದಾಗ ಅವನು ಸಾಮಾನ್ಯ ಸಾಕ್ಷಿ ಅಲ್ಲ ಎಂದು ಮನಗಂಡು ಅವನ ಹಿನ್ನೆಲೆಯನ್ನು ಗುರುತು ಹಚ್ಚಬೇಕಿತ್ತು. 18 ಅಡಿ ಗುಂಡಿ ತೆಗೆಯುವ ಕೆಲಸ ಮಾಡಿದ ಎಸ್ಐಟಿ ಸಾಕ್ಷಿ ಎಲ್ಲಿಂದ ಬಂದ, ಹೇಗೆ ಬಂದ? ಇಷ್ಟು ದಿನ ಏಕೆ ಸುಮ್ಮನಿದ್ದ ? ಇದರ ಹಿಂದೆ ಯಾವ ಷಡ್ಯಂತ್ರವಿದೆ ಎಂದು ತಿಳಿಯುವ ಗೋಜಿಗೆ ಹೋಗಿಲ್ಲ. ಮಂಜುನಾಥನ ದರ್ಶನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿಂದೆ ಮೀನು ತಿಂದು ದರ್ಶನ ಮಾಡಲು ಹೋಗಿದ್ದರು. ಆಗ ಮಂಜುನಾಥ ಅವರಿಗೆ ಮುಂದಿನ ದಾರಿಯನ್ನು ತೋರಿಸಿದ್ದ. ಈಗಲೂ ಕೂಡ ಮಂಜುನಾಥ ಈ ಸರ್ಕಾರಕ್ಕೆ ಸರಿಯಾಗಿ ಪಾಠ ಕಲಿಸುತ್ತಾನೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಜ್ಞಾನೇಶ್ವರ್, ಮೋಹನ್ ರೆಡ್ಡಿ, ಜ್ಯೋತಿಪ್ರಕಾಶ್, ಮಾಲತೇಶ್, ದೀನದಯಾಳ್, ರಶ್ಮಿ ಶ್ರೀನಿವಾಸ್, ನಾಗರಾಜ್, ಸುನಿತಾ ಅಣ್ಣಪ್ಪ, ಮಂಜುನಾಥ್, ರಾಹುಲ್ ಬಿದರೆ, ವಿಶ್ವನಾಥ್, ಸಂಗೀತಾ ನಾಗರಾಜ್ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post