Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಮಂತಿಕೆಯ ಬದುಕಿಗಿಂತ ನೆಮ್ಮದಿಯುತ ಬದುಕು ನಮ್ಮದಾಗಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್ ಅಭಿಪ್ರಾಯಪಟ್ಟರು.
ನಗರದ ಎಸ್.ಆರ್. ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ವತಿಯಿಂದ ಸೋಮವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಬಿಸಿಎ ಮತ್ತು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಹಣದ ಹಿಂದಿನ ಬದುಕಿಗಿಂತ ಗುಣದ ಬದುಕು ಅತಿಮುಖ್ಯ. ಅಂಧವಾಗಿರುವುದಕ್ಕಿಂದ ಆನಂದವಾಗಿರುವ ಬದುಕು ಬೇಕಿದೆ. ಹಾಗಾಗಿಯೇ ವ್ಯಕ್ತಿ ಕಳೆದು ಹೋದರು ಉತ್ತಮ ವ್ಯಕ್ತಿತ್ವ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಚೆನ್ನಾಗಿ ಕಾಣಬೇಕಾಗಿರುವುದು ನಮ್ಮ ಮುಖವಲ್ಲ, ವ್ಯಕ್ತಿತ್ವ ಮತ್ತು ಆಂತರ್ಯದ ಶುದ್ದತೆ. ಯಾರು ನನಗಿಂತ ಮುಂದಿದ್ದಾರೆ ಹಿಂದಿದ್ದಾರೆ ಎಂದು ಆಲೋಚಿಸುವುದಕ್ಕಿಂತ ಯಾರು ನನ್ನ ಜೊತೆಗಿದ್ದಾರೆ ಎಂದು ಆಲೋಚಿಸಬೇಕಿದೆ. ಮನುಷ್ಯನಲ್ಲಿ ದಡ್ಡತನವಿದ್ದರು ಪರವಾಗಿಲ್ಲ ಸಣ್ಣತನವಿರಬಾರದು. ಅಂತಹ ಸಣ್ಣತನಗಳಿಂದ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಹನೆ ಇಲ್ಲದವರು ಎಂದಿಗೂ ಸಾರಥಿಯಾಗಲಾರ. ತಾಳ್ಮೆ ಮತ್ತು ಉಳಿಸಿಕೊಳ್ಳುವ ಜಾಣ್ಮೆ ವ್ಯಕ್ತಿಯದಾಗಬೇಕಿದೆ. ಎಲ್ಲಿ ಹುಟ್ಟಬೇಕು ಎಂಬುದು ನಮ್ಮ ಕೈಯಲಿಲ್ಲ, ಆದರೇ ಬದುಕಿನಲ್ಲಿ ಎಲ್ಲಿ ಮುಟ್ಟಬೇಕು ಎಂಬುದು ನಮ್ಮ ಕೈಯಲ್ಲಿದೆ. ಅಂತಹ ಸುಂದರ ವ್ಯಕ್ತಿತ್ವ ನಿಮ್ಮದಾಗಬೇಕಿದೆ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ನಾಗರಾಜ ಮಾತನಾಡಿ, ಗುರಿಯ ನಿರ್ದಿಷ್ಟತೆ ವಿದ್ಯಾರ್ಥಿಗಳಲ್ಲಿರಬೇಕು. ಕನಸುಗಳನ್ನು ಕಾಣುವ ವ್ಯಕ್ತಿ ಸದಾ ಆ ಕನಸುಗಳನ್ನು ಸಾಧಿಸಲು ಪ್ರಯತ್ನ ಪಡುತ್ತಾನೆ. ಕನಸುಗಳನ್ನು ಕಾಣಲು ಪ್ರಾರಂಭಿಸಿ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿವಿಧ ವಿಭಾಗಗಳ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post