ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಭಾರತೀಯರಾದ ನಮಗೆ ಸದ್ಯ ಬ್ರಿಟಿಷರು ನೀಡಿದ ಚರಿತ್ರೆಯ ದಾಖಲೆಗಳೇ ಪಠ್ಯವಾಗಿದೆ. ಅದರ ಸತ್ಯಾಸತ್ಯತೆಯನ್ನು ವಿಮರ್ಶಿಸಲು ಮನಸ್ಸೇ ಮಾಡಿಲ್ಲ. ಕೇವಲ ಬ್ರಿಟಿಷರು ಕಂಡ ಘಟನೆ, ಸ್ಥಳ ಮಾಹಿತಿಗಳು ಅವರ ಸಾರ್ವಭೌಮತೆಯ ಪ್ರಭೆಗೆ ಕುಂದುಂಟಾಗದಂತೆ ಎಚ್ಚರವಹಿಸಿ ದಾಖಲೆ ಮಾಡಿದ್ದಾರಷ್ಟೆ ಎಂದು ರಾಜ್ಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಸದಸ್ಯ ಶ್ರೀಲಕ್ಷ್ಮೀನಾರಾಯಣ ಕಾಶಿ ಅಭಿಪ್ರಾಯಪಟ್ಟರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಏರ್ಪಡಿಸಿದ್ದ ಮೇ.ಜ.ಜಿ.ಡಿ. ಭಕ್ಷಿ ಅವರ ಕೃತಿ ಸರಸ್ವತಿ ನಾಗರಿಕತೆ ಕನ್ನಡ ಅನುವಾದದ ಪುಸ್ತಕ ಪರಿಚಯ ವೆಬಿನಾರ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಭಾರತೀಯ ಪರಿಸರದ ನೈಜತೆಯನ್ನು ಅವರು ಒಪ್ಪಿಕೊಳ್ಳಲಿಲ್ಲ. ಮುಸ್ಲೀಮರು ನಂತರ ದೇಶೀಯ ಅರಸರ ಬಗ್ಗೆ ಮಾತ್ರ ಅತೃಪ್ತವಾಗಿ ಬರೆದಿಟ್ಟರು. ನಾವು ಈಗ ಅದನ್ನೇ ಬಾಯಿಪಾಠ ಮಾಡಿಕೊಂಡು ಬಂದಿದ್ದೇವೆ! ಭಾರತೀಯತೆಯ ಸೊಗಡಿನ ಯಾವ ಐತಿಹ್ಯವನ್ನೂ ಅವರು ಮನಸಾರೆ ದಾಖಲೆ ಮಾಡದೇ ವಂಚಿಸಿದ್ದಾರೆ. ಪ್ರತ್ಯಕ್ಷ ಕಂಡದ್ದು ಮಾತ್ರ ಸತ್ಯ. ನಮ್ಮ ವೇದಕಾಲೀನ ಉಲ್ಲೇಖಗಳ ಬಗ್ಗೆ ಅವರಿಗೆ ಅವಜ್ಞೆ ಇತ್ತು. ಹೀಗಾಗಿ ನಾಗರಿಕತೆಯ ಬಗ್ಗೆ ದಾಖಲಿಸುವಾಗ ಸಿಂಧೂ ಕಣಿವೆಯ ಪುರಾವೆಗಳನ್ನ ಕೇವಲ ಒಂದು ಕಾಲಕ್ಕೆ ಸೀಮಿತಗೊಳಿಸಿ ಇತ್ತೀಚಿನ ಬೆಳೆವಣಿಗೆ ಎಂಬಂತೆ ಬರೆದಿದ್ದಾರೆ ಎಂದರು.
ಸಿಂಧೂ ನದಿಗಿಂತ ಮುಂಚೆ ಇದ್ದ ಸರಸ್ವತಿ ನದಿ ಅವರ ಪ್ರಜ್ಞೆಗೆ ಬಾರದೇ ಹೋದದ್ದು ಒಂದು ದುರಾದೃಷ್ಟ. ಈಗ ಮೇಜರ್ ಜನರಲ್ ಭಕ್ಷಿಯರಂತಹ ಚರಿತ್ರಾನ್ವೇಷಿಗಳು ಸರಸ್ವತಿ ನದಿಯ ದಂಡೆಯಲ್ಲೇ ನಮ್ಮ ನಾಗರಿಕತೆ ಬೆಳೆದದ್ದು ಎಂದು ಸ್ಪಷ್ಟ ದಾಖಲೆಗಳ ಸಮೇತ ಪ್ರಸ್ತುತ ಸಮಾಜದಲ್ಲಿ ಒಂದು ಚರಿತ್ರೆಯ ಮರು ಚಿಂತನೆ ನಡೆಸಿದ್ದಾರೆ. ಸರಸ್ವತಿ ನದಿ ಕೇವಲ ಕಲ್ಪನೆಯಲ್ಲ ಉಗಮವಿತ್ತು ಎಂದು ಭಕ್ಷಿ ಅವರ ಪುಸ್ತಕ ಈಗ ಸ್ಥಾಪಿತವಾಗಿರುವ ಬ್ರಿಟಿಷ್ ಬರಹಗಾರರ ಹಲವು ಚಾರಿತ್ರಿಕ ದಾಖಲೆಗಳನ್ನು ತಿರಸ್ಕರಿಸುತ್ತದೆ. ಅವುಗಳಿಗೆ ಭೌಗೋಳಿಕ, ಭೂವೈಜ್ಞಾನಿಕ, ವರ್ಣತಂತುಗಳ ಅಧ್ಯಯನ ಮತ್ತು ಪುರಾತತ್ವ ಶೋಧನೆಗಳ ಸಾಕ್ಷ್ಯನೀಡಿದ್ದಾರೆ. ನಮ್ಮ ಚರಿತ್ರೆಯ ವಿದ್ವಾಂಸ ವಲಯದಲ್ಲಿ ಈ ಪುಸ್ತಕದ ಸಂಗತಿಗಳು ಮರು ಚರ್ಚೆಯಾಗುವ ಅಗತ್ಯವಿದೆ. ಈ ಚರ್ಚೆ ನಮ್ಮ ನಾಗರಿಕತೆಯ ಪೂರ್ವ ಹಂತಗಳನ್ನ ಮತ್ತಷ್ಟು ಹಿರಿಮೆಯ ಹಂತಕ್ಕೊಯ್ಯಲು ಸಾಧ್ಯವಿದೆ ಎಂದು ಕಾಶಿ ಅವರು ಅಭಿಪ್ರಾಯಪಟ್ಟರು.
ಸರಸ್ವತಿ ಪರಿಭ್ರಮಣ ಎಂಬ ಯೋಜನೆ ಮೂಲಕ ನದಿಯ ಹರಿವಿನ ಸುತ್ತಲೂ ಪ್ರವಾಸೋದ್ಯಮ ತಾಣ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಅವಕಾಶವಿದೆ. ಪ್ರವಾಸದ ಮೂಲಕ ಸರಸ್ವತಿ ನದಿಯ ಅಸ್ತಿತ್ವವನ್ನು ಇಂದಿನ ಮುಂದಿನ ಪೀಳಿಗೆಯವರಲ್ಲಿ ಜಾಗೃತಗೊಳಿಸಬಹುದು. ಚರಿತ್ರೆಯ ಮರುಸೃಷ್ಟಿಗೆ ಕಾರಣವಾಗುವ ಭಕ್ಷಿಯರಂತಹ ಸಂಶೋಧನಾ ಬರಹಗಳನ್ನು ವ್ಯಾಪಕ ಓದುವಂತಾಗಬೇಕು. ಇಂತಹ ಅಮೂಲ್ಯ ಶೋಧಲೇಖನಗಳನ್ನು ಶಾಲಾ ಕಾಲೇಜುಗಳ ಪಠ್ಯಕ್ರಮಗಳಲ್ಲೂ ನಮ್ಮ ವಿದ್ಯಾರ್ಥಿ ಸಮುದಾಯ ಅಭ್ಯಾಸ ಮಾಡಲು ಅನುವು ಮಾಡಿಕೊಡಬೇಕು. ಆಗ ಮಾತ್ರ ಭಾರತೀಯ ನೈಜ ಚರಿತ್ರೆಯ ಸ್ವರೂಪ ಯುವ ಜನಾಂಗಕ್ಕೆ ತಿಳಿಯುತ್ತದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಅಂತರ್ಜಾಲೀಯ ಕಾರ್ಯಕ್ರಮದಲ್ಲಿ ಕೃತಿ ಪರಿಚಯಕಾರ ಎಂ.ಎಂ. ದಿನೇಶ್ ಪೈ ಅವರು ಮಾತನಾಡಿ, ಪ್ರಸ್ತುತ ಗ್ರಂಥವು ಅತ್ಯಂತ ಶಾಸ್ತ್ರೀಯವಾಗಿ ನಡೆಸಿದ ಅಧ್ಯಯನದ ಸಂಗತಿಗಳನ್ನ ಹೊಂದಿದೆ. ಪ್ರಾಗೈತಿಹಾಸಿಕವಾಗಿ ಸೂಕ್ತ ಪುರಾವೆಗಳಿಂದ ಪ್ರತಿಯೊಂದು ವಿಷಯವೂ ಸಮರ್ಥಿಸಲ್ಪಟ್ಟಿದೆ. ಹೀಗಾಗಿ ಸರಸ್ವತಿ ನದಿಯ ತಟದಲ್ಲಿ ನಮ್ಮ ನಾಗರಿಕತೆ ವಿಕಸನಗೊಂಡಿದೆ. ಒಂಭತ್ತೂವರೆ ಸಾವಿರ ವರ್ಷಗಳ ಹಿಂದಕ್ಕೆ ಸಾಗಿ ಸಿಂಧೂ ನದಿಗಿಂತ ಪ್ರಾಚೀನತೆ ಪಡೆಯುತ್ತದೆ. ಸರಸ್ವತಿ ಈಗ ಬತ್ತಿರಬಹುದು. ಆದರೆ ಅದರ ಉಗಮ ಮತ್ತು ಹರಿವಿನ ಬಗ್ಗೆ ತಕ್ಕ ಸಾಕ್ಷ್ಯಗಳನ್ನು ಈ ಪುಸ್ತಕದಲ್ಲಿ ಲೇಖಕ ಭಕ್ಷಿ ಅವರು ನೀಡಿ ಉಪಕರಿಸಿದ್ದಾರೆ. ಇತ್ತೀಚಿನ ಉಪಗ್ರಹಗಳ ಚಿತ್ರಗಳೇ ಸರಸ್ವತಿ ನದಿಯ ಜಾಡನ್ನು ಸ್ಪಷ್ಟೀಕರಿಸಿ ಹೇಳಿವೆ. ಹೀಗಾಗಿ ಕೇವಲ ವೇದಗಳಲ್ಲಿನ ಉಲ್ಲೇಖ ಕಾಲ್ಪನಿಕವಲ್ಲ ಸರಸ್ವತಿ ನದಿಯ ಅಸ್ತಿತ್ವ ಸತ್ಯಸ್ಯಸತ್ಯ ಎಂದು ದಿನೇಶ್ ಪೈ ಹೇಳಿದರು.
ಲೇಖಕ, ಅಂಕಣಕಾರ ಡಾ.ಸಿ.ಜಿ. ರಾಘವೇಂದ್ರ ವೈಲಾಯ ಅವರು ಪ್ರಸ್ತುತ ಪುಸ್ತಕದ ಅನುವಾದ ಕಾರ್ಯದ ಬಗ್ಗೆ ಮಾತಾನಾಡಿ, ಸುಮಾರು ಒಂಭತ್ತು ತಿಂಗಳಲ್ಲಿ ಅನುವಾದ ಪೂರೈಸಿದೆ. ಅಲ್ಲಿನ ವಿಚಾರಗಳ ಬಗ್ಗೆ ಚಾರಿತ್ರಿಕ ಮನೋಸಿದ್ಧತೆಯನ್ನು ಅತ್ಯಂತ ಜಾಗರೂಕತೆಯಿಂದ ಮಾಡಿಕೊಂಡೆ. ಭಕ್ಷಿ ಅವರು ನೀಡಿದ ವಿವರಗಳು ಬಹಳ ಜಾವಾಬ್ದಾರಿಯಿಂದ ಕೂಡಿದ್ದವು. ತಾನು ಅಷ್ಟೇ ಗಂಭೀರವಾಗಿ ಮನನ ಮಾಡಿಕೊಂಡೆ. ಪ್ರತಿಯೊಂದು ಪುಟಗಳಲ್ಲೂ ಪಾರಿಭಾಷಿಕ, ತಾಂತ್ರಿಕ ಪದಗಳೇ ವಿಪುಲವಾಗಿದ್ದವು. ಅಷ್ಟೇ ಹೊಣೆಗಾರಿಕೆಯಿಂದ ಅವುಗಳಿಗೆ ಸಮಾನಾರ್ಥ ಪದಗಳನ್ನು ಅನ್ವೇಷಿಸಿದೆ. ಅದೊಂದು ಅಪೂರ್ವ ಅನುಭವ. ತಮಗೆ ಈ ಅನುವಾದ ಒಂದು ತಪಸ್ಸಿನಂತೆ ಅನಿಸಿತು. ಈ ಕೃತಿಯ ಅನುವಾದದ ಸುತ್ತ ಸಂಗ್ರಹಿಸಿದ ಅನೇಕ ಚಾರಿತ್ರಿಕ ಸಂಗತಿಗಳು ಹೇರಳವಾಗಿವೆ. ಬಹುಷಃ ಆ ವಿಷಯಗಳನ್ನೇ ನಿರೂಪಿಸಿದರೆ ಇನ್ನೊಂದು ಗ್ರಂಥವೇ ಆಗುತ್ತದೆ. ಮುಂದಿನ ಪುಸ್ತಕದಲ್ಲಿ ಮಿಕ್ಕ ವಿಚಾರಗನ್ನು ಪ್ರಚುರಪಡಿಸುವೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಾ.ಸುಧೀಂದ್ರ ಅವರು ಮಾತನಾಡಿ, ಶಿವಮೊಗ್ಗ ಸಾಹಿತ್ಯ ಸಂಸ್ಕೃತಿಗಳ ನೆಲೆವೀಡು. ಮುಂದಿನ ಪುಸ್ತಕದ ಲೋಕಾರ್ಪಣೆಯನ್ನು ಶಿವಮೊಗ್ಗೆಯಲ್ಲೇ ಏರ್ಪಡಿಸುವ ಆಶಯ ಇಲ್ಲಿನ ಸಹೃದಯರಿಗೆ ಮತ್ತು ಪರಿಷತ್ತಿಗಿದೆ. ಪುಸ್ತಕ ಶೀಘ್ರ ಬರಲಿ ಎಂದು ಹಾರೈಸಿದರು.
ಶಿವಮೊಗ್ಗ ಘಟಕದ ಸಹ ಸಂಚಾಲಕಿ ಲಕ್ಷ್ಮೀ ಮಹೇಶ್ ಪ್ರಾರ್ಥಿಸಿ, ಪರಿಷತ್ತಿನ ಕೋಶಾಧಿಕಾರಿ ಕೆ.ಜಿ. ಮಂಜುನಾಥ ಶರ್ಮ ಸ್ವಾಗತಿಸಿದರು. ಕಾರ್ಯದರ್ಶಿ ಎಚ್.ಎನ್. ಸತ್ಯನಾರಾಯಣರಾವ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post