ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೈಕ್ರೋ ಫೈನಾನ್ಸ್ #Micro finance ಕಂಪನಿಗಳ ಹಾವಳಿ ತಪ್ಪಿಸಬೇಕು. ಮತ್ತು ಬಗುರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಸಾಮೂಹಿಕ ನಾಯಕತ್ವ) ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.
ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಂಪನಿಗಳು ಕಾನೂನುಬಾಹಿರವಾಗಿ ಸಾಲ ವಸೂಲಾತಿ ಮಾಡುತ್ತಿವೆ. ಕಂಪನಿಯ ಸಿಬ್ಬಂದಿಗಳು ಗೂಂಡಾಗಿರಿ ನಡೆಸುತ್ತಿದ್ದಾರೆ. ಸಾಲದ ಕಿರುಕುಳಕ್ಕೆ ಸಿಕ್ಕ ರೈತರು, ಬಡವರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ಕೂಡಲೇ ಇದರ ವಿರುದ್ಧ ಕ್ರಮತೆಗೆದುಕೊಳ್ಳಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಬಗುರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ರೈತ ವಿರೋಧಿ ಹೊಸ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಕನಿಷ್ಠ ಉತ್ತೇಜನ ಹಾಗೂ ಬೆಂಬಲ ಬೆಲೆ ನಿಗದಿಗೊಳಿಸಬೇಕು. ಬೆಲೆ ಭರವಸೆ ನೀಡಬೇಕು. ಕರ್ನಾಟಕ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಆಗಬೇಕು. ಭಾರತ ಸರ್ಕಾರ ನಿಗದಿಪಡಿಸುವ ಎಂ.ಎಸ್.ಪಿ. ಬೆಲೆಯನ್ನು ಕಾನೂನು ವ್ಯಾಪ್ತಿಗೆ ತರಬೇಕು, ಅದನ್ನು ಖಾತರಿಪಡಿಸಬೇಕು ಮತ್ತು ಖರೀದಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Also read: ಮಹಿಳಾ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ | ಶ್ರೀ ಪ್ರಣವಾನಂದ ಸ್ವಾಮೀಜಿ ಖಂಡನೆ
ರೈತರ ಕೃಷಿ ಪಂಪ್‍ಸೆಟ್ ಗಳಿಗೆ ತಂತಿ ಇನ್ನಿತರೆ ವಸ್ತುಗಳನ್ನು ರೈತರೇ ಭರಿಸಬೇಕು ಎನ್ನುವ ಆದೇಶ ವಾಪಸ್ ಪಡೆದು ಈ ಹಿಂದೆ ಇದ್ದಂತೆ ಆದೇಶ ಜಾರಿಗೊಳಿಸಬೇಕು. ಭದ್ರಾ ಜಲಾಶಯಕ್ಕೆ ತುಂಗಾ ಜಲಾಶಯದಿಂದ ನೀರು ತುಂಬಿಸುವ ಯೋಜನೆಯನ್ನು ಶೀಘ್ರವೇ ಮುಗಿಸಬೇಕು. ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ನಬಾರ್ಡ್ ಮೂಲಕ ಕೋಆಪರೇಟಿವ್ ಸೊಸೈಟಿಗಳಿಗೆ ನೀಡುವಂತಹ ಸಾಲದ ಮೊತ್ತವನ್ನು ಕಡಿತಗೊಳಿಸಬಾರದು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಧರಣಿಯಲ್ಲಿ ರಾಜ್ಯರೈತ ಸಂಘದ ಅಧ್ಯಕ್ಷೀಯ ಮಂಡಳಿ ಸದಸ್ಯ ಕೆ.ಟಿ. ಗಂಗಾಧರ್, ಜಿಲ್ಲಾ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ, ಜಿಲ್ಲಾಧ್ಯಕ್ಷ ಹಾಲೇಶಪ್ಪ ಗೌಡ್ರು, ಪ್ರಮುಖರಾದ ಯಶವಂತರಾವ್ ಘೋರ್ಪಡೆ, ವೀರೇಶ್, ಮಂಜುನಾಥೇಶ್ವರ ಹೆಚ್.ಎಸ್., ಮೋಹನ್ ಕುಮಾರ್, ಜಗದೀಶ್ ನಾಯಕ್, ಹಿರಣ್ಣಯ್ಯ, ಎಂ. ಗಿರೀಶ್ ಮಾಳೇನಹಳ್ಳಿ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post