ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಾಜನೂರು ಸಮೀಪ ನಿನ್ನೆ ವಿಭಿನ್ನವಾದ ಘಟನೆಯೊಂದು ನಡೆದಿದ್ದು ಇವತ್ತು ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಲ್ಲದೆ ಯುವತಿಯೊಬ್ಬಳ ವಿಚಾರ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಮಾಹಿತಿ ಪ್ರಕಾರ, ನಾಲ್ವರು ಯುವಕರು ಶಿವಮೊಗ್ಗ ಜಿಲ್ಲೆಯ ಹಾಸ್ಟೆಲ್ ವೊಂದರಲ್ಲಿರುವ ವಿದ್ಯಾರ್ಥಿಯೊಬ್ಬಳನ್ನ ಒಮಿನಿ ವಾಹನದಲ್ಲಿ ಗಾಜನೂರು ಕಡೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. (ಯಾವುದೆ ವೈಯಕ್ತಿಕ ವಿವರಗಳನ್ನ ನೀಡಲಾಗುವುದಿಲ್ಲ)

ಸಾಮಾನ್ಯವಾಗಿ ಗಾಜನೂರು ಡ್ಯಾಂ ನೋಡಲು ಹಲವಾರು ಮಂದಿ ತೆರಳುತ್ತಾರೆ. ಆದರೆ ಕತ್ತಲಾದ ಬಳಿಕ ನಾಲ್ವರು ಯುವಕರು ಯುವತಿಯ ಜೊತೆಗೆ ತೆರಳಿದ್ದಾರೆ. ಆದರೆ ಅಲ್ಲಿ ಏನಾಯ್ತು ಎಂಬುದು ತಿಳಿದಿಲ್ಲವಾದರೂ, ಒಂದು ಕಾರಣಕ್ಕೆ ಯುವಕರ ನಡುವೆ ಹಾಗೂ ಅವರ ಜೊತೆಗೆ ಬಂದಿದ್ದ ಯುವತಿ ನಡುವೆ ಜಗಳವಾಗಿದೆ ಎನ್ನಲಾಗಿದೆ. ಇದನ್ನ ಅಲ್ಲಿದ್ದ ಸ್ಥಳೀಯ ಯುವಕರು ಗಮನಿಸಿದ್ದಾರೆ. ಅಲ್ಲದೆ ಮಧ್ಯಪ್ರವೇಶ ಮಾಡಿ ಯುವತಿ ಜೊತೆಗೆ ಬಂದಿದ್ದ ಯುವಕರಿಗೆ ಹೊಡೆದು ಓಡಿಸಿದ್ದಾರೆ. ಅಲ್ಲದೆ ಯುವತಿಯನ್ನ ತರಾಟೆ ತೆಗೆದುಕೊಂಡ ನಾಲ್ವರಿದ್ದ ಸ್ಥಳೀಯ ಯುವಕರು ಆಕೆಯನ್ನ ಅಲ್ಲಿಂದ ಕರೆದೊಯ್ದಿದ್ದಾರೆ. ಅವರು ಹೀಗೆ ಎಲ್ಲಿಗೆ ಕರೆದೊಯ್ದರು ಎಂಬುದು ನಿಗೂಢವಾಗಿತ್ತು.
ಪೊಲೀಸರಿಗೆ ದೂರು ಕೊಟ್ಟ ಯುವಕರು
ಇದಾದ ಬಳಿಕ ಇತ್ತ ಸ್ಥಳೀಯ ಯುವಕರ ಪೆಟ್ಟಿಗೆ ಓಡಿಹೋಗಿದ್ದ ಯುವತಿ ಜೊತೆಗೆ ಬಂದಿದ್ದವರು ನೇರವಾಗಿ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆಯೊಂದಕ್ಕೆ ತೆರಳಿ ಹೀಗೆ ತಮ್ಮೊಂದಿಗೆ ಬಂದಿದ್ದ ಯುವತಿ ಕಿಡ್ನ್ಯಾಪ್ ಆಗಿದ್ದಾಳೆ ಎಂದು ದೂರು ಹೇಳಿದ್ದಾರೆ.

Also read: ಶಿರಾಳಕೊಪ್ಪ ಭೀಕರ ರಸ್ತೆ ಅಪಘಾತ | ಖಾಸಗಿ ಬಸ್ ಪಲ್ಟಿ | ಕಾರು ಚಾಲಕ ಸಾವು
ಬೆಳಗ್ಗೆ ಪತ್ತೆಯಾದ ಯುವತಿ
ಇವತ್ತು ಬೆಳಗ್ಗೆ ಯುವತಿ ತೋಟವೊಂದರಲ್ಲಿದ್ದ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಪರಿಣಾಮ ಪೊಲೀಸರಿಗೆ ನಿಟ್ಟುಸಿರು ಇಳಿದಿದೆ. ಯುವತಿಯನ್ನ ರಕ್ಷಿಸಿದ ಪೊಲೀಸರು ಆಕೆಯನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಪೂರ್ತಿ ಮಾಹಿತಿಯನ್ನು ಪಡೆದುಕೊಳ್ಳುವ ಸಲುವಾಗಿ ಸಂಬಂಧ ಪಟ್ಟ ಎಲ್ಲರನ್ನು ಪೊಲೀಸರು ಎನ್‌ಕ್ವೈರಿಗೆ ಒಳಪಡಿಸುತ್ತಿದ್ದಾರೆ. ಮೇಲಾಗಿ ಯುವಕರ ಮೇಲೆ ಹಲ್ಲೆ ಮಾಡಿದ್ದ ಸ್ಥಳೀಯ ಯುವಕರ ಗುರುತು ಪತ್ತೆಮಾಡಿ ಅವರನ್ನ ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.

ಮಳೆಗಾಲ ಮಲೆನಾಡು ಚೆಂದ, ಥಂಡಿ ಹಿಡಿದ ಊರಿನಲ್ಲಿ, ಮನಸ್ಸು ತಿರುಗಾಟವನ್ನೆ ಬಯಸುತ್ತದೆ ನಿಜ. ಹಾಗಂತ ಸಿಕ್ಕಸಿಕ್ಕವರನ್ನ ನಂಬಿಕೊಂಡು ಎಲ್ಲಿಗೂ ಹೋಗಲಾಗದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post