ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬರೋಬ್ಬರಿ 17 ಗಂಟೆಗಳ ಅದ್ಧೂರಿ ರಾಜಬೀದಿ ಉತ್ಸವದೊಂದಿಗೆ ಹಿಂದು ಮಹಾಸಭಾ ಗಣಪತಿಯನ್ನು ಇಂದು ಬೆಳಗಿನ ಜಾವ ಬೀಮನ ಮಡುವಿನಲ್ಲಿ ವಿಸರ್ಜಿಸಲಾಯಿತು.
ನಿನ್ನೆ ಬೆಳಿಗ್ಗೆ 11 ಗಂಟೆಗೆ ಭೀಮೇಶ್ವರ ದೇವಾಲಯದಿಂದ ಆರಂಭವಾದ ಮೆರವಣಿಗೆ ಕೋಟೆ ಮಾರಿಕಾಂಬ ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕನ ವೃತ್ತ, ಹಳೇ ಮಾರ್ಕೇಟ್ ರಸ್ತೆ, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್ ರಸ್ತೆ, ಶಿವಮೂರ್ತಿ ಸರ್ಕಲ್, ಮಹಾವೀರ ವೃತ್ತ, ಡಿವಿಎಸ್ ಸರ್ಕಲ್, ಕೋಟೆ ರಸ್ತೆ ಮೂಲಕ ಭೀಮೇಶ್ವರ ದೇವಸ್ಥಾನದ ಹಿಂಬದಿಯ ತುಂಗನದಿಯ ಭೀಮನ ಮಡುವಿನಲ್ಲಿ ಗಣಪತಿಯನ್ನು ವಿಸರ್ಜಿಸುವ ಮೂಲಕ ಉತ್ಸವ ಸಂಪನ್ನವಾಯಿತು.
ಕೊರೋನಾ ಹಿನ್ನೆಲೆ ಸತತ 2 ವರ್ಷ ಮೆರವಣಿಗೆ ಅವಕಾಶವಿರಲಿಲ್ಲವಾದರೂ, ಈ ಬಾರಿಯ ರಾಜಬೀದಿ ಉತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದು, ಸಂಜೆಯ ವೇಳಿಗೆ ನಗರದಲ್ಲಿ ನಿಯಮಿತಕ್ಕಿಂತ ಹೆಚ್ಚಿನ ಸಂಚಾರ ದಟ್ಟಣೆ ಇದ್ದುದು ಕಂಡುಬಂದಿತು.
ನಗರದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರು, ಯುವತಿಯರು, ಸಣ್ಣ ಮಕ್ಕಳು ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕುತ್ತಿದ್ದುದು ವಿಶೇಷವಾಗಿತ್ತು.
ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಜನಸ್ತ್ರೋಮ ಹರಿದು ಬಂದ ಕಾರಣ ಪ್ರತಿ ಬಾರಿಗಿಂತ ನಾಲ್ಕು ಗಂಟೆ ತಡವಾಗಿ ಶಾಂತ ರೀತಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಯಿತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















