ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಣ್ಣಿನ ಗಂಭೀರ ಕಾಯಿಲೆಯಿಂದ ದೃಷ್ಟಿ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದ ಯುವತಿಗೆ ಶಂಕರ ಕಣ್ಣಿನ ಆಸ್ಪತ್ರೆ Shankara Eye Hospital ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಮರುದೃಷ್ಟಿ ನೀಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರಿನ 22 ವರ್ಷದ ಯುವತಿ, ಕಣ್ಣಿನ ಸಮಸ್ಯೆಯಿಂದ ಓದುವುದು, ಮೊಬೈಲ್ ಬಳಸುವುದು ಸೇರಿದಂತೆ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಳು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಸಮಸ್ಯೆಗೆ ಪರಿಹಾರ ದೊರೆಯಲಿಲ್ಲ.
ನಂತರ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ, ಆಕೆಗೆ ಕೆರಾಟೋಕೋನಸ್ ಎಂಬ ಕಾರ್ನಿಯಾ ಸಂಬಂಧಿತ ಕಾಯಿಲೆ ಇರುವುದಾಗಿ ಪತ್ತೆಯಾಯಿತು.
ಆಸ್ಪತ್ರೆಯ ಕಾರ್ನಿಯಾ ತಜ್ಞ ಡಾ. ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಡಾಲ್ಕ್ (DALK) ವಿಧಾನದಲ್ಲಿ ಎರಡು ಹಂತಗಳಲ್ಲಿ ಎರಡೂ ಕಣ್ಣುಗಳಿಗೆ ಕಾರ್ನಿಯಾ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಯುವತಿಯ ದೃಷ್ಟಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಈಗ ಆಕೆ ಸಾಮಾನ್ಯವಾಗಿ ಓದಲು ಹಾಗೂ ದೂರದ ವಸ್ತುಗಳನ್ನು ನೋಡಲು ಸಾಧ್ಯವಾಗಿದೆ. ಇದರಿಂದ ತನ್ನ ಶಿಕ್ಷಣವನ್ನು ಪುನರಾರಂಭಿಸುವ ವಿಶ್ವಾಸ ಆಕೆಗೆ ಬಂದಿದೆ.
ಈ ಕುರಿತು ಮಾತನಾಡಿದ ಡಾ. ಮಲ್ಲಿಕಾರ್ಜುನ ಅವರು, “ಕೆರಾಟೋಕೋನಸ್ ಕಾಯಿಲೆ ಸಾಮಾನ್ಯವಾಗಿ ಬಾಲ್ಯ ಅಥವಾ ಹದಿಹರೆಯದಲ್ಲಿ ಆರಂಭವಾಗುತ್ತದೆ. ಆದ್ದರಿಂದ ಮುಂಜಾಗ್ರತೆಯಾಗಿ ನಿಯಮಿತ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಾವಶ್ಯಕ,” ಎಂದು ಸಲಹೆ ನೀಡಿದ್ದಾರೆ.
1977ರಲ್ಲಿ ಡಾ. ಆರ್.ವಿ. ರಮಣಿ ಮತ್ತು ಡಾ. ರಾಧಾ ರಮಣಿ ಅವರಿಂದ ಸ್ಥಾಪಿತವಾದ ಶಂಕರ ಐ ಫೌಂಡೇಶನ್ ಇಂಡಿಯಾ ಲಾಭರಹಿತ ಸಂಸ್ಥೆಯಾಗಿದ್ದು, ಬಡ ಮತ್ತು ಹಿಂದುಳಿದ ವರ್ಗಗಳಿಗೆ ಗುಣಮಟ್ಟದ ನೇತ್ರ ಚಿಕಿತ್ಸೆಯನ್ನು ಒದಗಿಸುತ್ತಿದೆ. ದೇಶದಾದ್ಯಂತ 14 ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಗಳ ಮೂಲಕ ಲಕ್ಷಾಂತರ ಜನರಿಗೆ ಸೇವೆ ನೀಡುತ್ತಿದೆ.
ನೇತ್ರದಾನದ ಮೂಲಕ ಅನೇಕ ಮಂದಿಗೆ ದೃಷ್ಟಿ ನೀಡಲು ಸಾಧ್ಯವಾಗುವುದರಿಂದ ಸಾರ್ವಜನಿಕರು ಈ ಬಗ್ಗೆ ಜಾಗೃತಿ ಹೊಂದಬೇಕು ಎಂದು ವೈದ್ಯರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Comments 1