ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ದಿನಗಳಲ್ಲಿ ನಾವೆಲ್ಲರೂ ಗಮನಿಸುತ್ತಿರುವ ಹಾಗೆ ಶೈಕ್ಷಣಿಕ ಹಾಜರಾತಿ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರು ಗಮನಾರ್ಹ ಸಾಧನೆ ಮಾಡುತ್ತಿದ್ದು, ಡೊಳ್ಳು ಕುಣಿತ, ಕಂಸಾಳೆ ಮೊದಲಾದ ಕಷ್ಟಕರ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುನ್ನಡೆಯುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಶಿವಮೊಗ್ಗ 2022-23 ನೆ ಸಾಲಿನ ವಿದ್ಯಾರ್ಥಿ ಸಾಂಸ್ಕೃತಿಕ -ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಐಎಎಸ್, ಕೆಎ ಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲೂ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಕಾಲೇಜು ಹಂತದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಇಂತಹ ಪ್ರತಿಭಾವಂತ ಮಹಿಳೆಯರಿಂದ ದೇಶದ ಪ್ರಗತಿಗೆ ಹೆಚ್ಚಿನ ಕೊಡುಗೆ ಸಲ್ಲುತ್ತದೆ ಎಂದರು.
ಸಹ್ಯಾದ್ರಿ ವಾಣಿಜ್ಯ ಕಾಲೇಜು ಈ ಭಾಗದ ಉನ್ನತ ವಿದ್ಯಾಕೇಂದ್ರವಾಗಿದ್ದು ವರ್ಷವಿಡೀ ಉತ್ತಮ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆದ್ಯತೆ ನೀಡಿ ಸಹ್ಯಾದ್ರಿ ಕಾಲೇಜಿಗೆ ಇನ್ನೂ ಉನ್ನತ ಮಟ್ಟದ ಅನುಕೂಲತೆಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಅಮೇರಿಕಾದಿಂದ ಆಗಮಿಸಿದ ಸಾಫ್ಟ್ ವೇರ್ ಇಂಜಿನಿಯರ್ ಮನೋಹರ ಹುನಗುಂದ ಮಾತನಾಡಿ, ಭಾರತದಷ್ಟು ವೈವಿಧ್ಯತೆ ಇರುವ ದೇಶ ಈ ಪ್ರಪಂಚದಲ್ಲಿಯೇ ಬೇರೊಂದಿಲ್ಲ.. ತಾಯಿ ನಾಡಿನ ಬಗ್ಗೆ ಸದಾ ಆದರ ಅಭಿಮಾನ ನಮಗಿರಲಿ. ಸೋಮಾರಿಗಳಾಗದೆ ನಿರಂತರ ಕ್ರಿಯಾಶೀಲತೆ ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
Also read: ಶ್ರಾವಣ ಮಾಸ ಹಿನ್ನೆಲೆ: ಶ್ರೀ ರೇಣುಕಾಂಬ ದೇಗುಲದಲ್ಲಿ ವಿಶೇಷ ಧಾರ್ಮಿಕ ಪೂಜೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ. ಕೆ. ವೀಣಾ ಮಾತನಾಡಿ, ಸ್ಪರ್ಧಾತ್ಮಕ ಮನೋಭಾವ ಇಂದಿನ ವಿದ್ಯಾರ್ಥಿಗಳಿಗೆ ಬಹಳ ಮುಖ್ಯ. ಪದವಿ ಮುಗಿಸಿ ಉದ್ಯೋಗ, ಉನ್ನತ ಶಿಕ್ಷಣದ ಹುಡುಕಾಟದಲ್ಲಿರುವ ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಉತ್ತಮ ಅವಕಾಶ ಪಡೆಯಬೇಕಾದರೆ ಸ್ಪರ್ಧೆ ಅನಿವಾರ್ಯ. ಆತ್ಮಸ್ಟೈರ್ಯದಿಂದಲೇ ಮಹತ್ವ ವಾದುದನ್ನು ಸಾಧಿಸಬೇಕು ಎಂದರು.
ಹಿರಿಯ ವಿದ್ಯಾರ್ಥಿ ಶ್ರೀ ಮನ್ಸೂರ್ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಶೇಷ ಆಕರ್ಷಣೆಯಾಗಿ ಯು.ಎಸ್.ಎಯಿಂದ ಆಗಮಿಸಿದ ಖ್ಯಾತ ಕರ್ನಾಟಕ ಸಂಗೀತ ಗಾಯಕಿ ಉಷಾ ಪ್ರಭು ಹಾಗೂ ಕು. ಶಿವಶಂಕರಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಿವೃತ್ತ ಬ್ಯಾಂಕ್ ಉದ್ಯೋಗಿ ಅಮರ್ ಬಾಬು ಅವರು ಪ್ರತಿ ವರ್ಷದಂತೆಯೇ ಈ ವರ್ಷವೂ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ರಾಂಕ್ ವಿಜೇತ ವಿದ್ಯಾರ್ಥಿಗಳನ್ನು, ಎನ್ ಎಸ್ ಎಸ್, ಎನ್ ಸಿಸಿ ಹಾಗೂ ಕ್ರೀಡಾ ಸಾಧಕರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಡಾ ಕುಂದನ್ ಬಸವರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕರಾದ ಡಾ ಶಿವಮೂರ್ತಿ ಎ, ಡಾ ಗಿರಿಧರ್ ಕೆ. ವಿ ಹಾಗೂ ಎಲ್ಲಾ ಉಪನ್ಯಾಸಕರು, ಸಿಬ್ಬಂದಿಗಳು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಕು. ನಿರೀಕ್ಷಾ, ಕು. ಚಿನ್ಮಯಿ ಕಾರ್ಯಕ್ರಮ ನಿರೂಪಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















